ಪಕ್ಕದ ಮನೆಯ ಮಹಿಳೆಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧಕ್ಕಾಗಿ 71,000 ರೂಪಾಯಿ ದಂಡ ಕಟ್ಟಬೇಕು ಎಂದು ಸಮುದಾಯ ಪಂಚಾಯಿತಿಯೊಂದು ನೀಡಿದ ತೀರ್ಪಿಗೆ ಬೆದರಿದ ಪತಿ, ತನ್ನ ಪತ್ನಿ ಮತ್ತು ಪ್ರೇಯಸಿ ಹಾಗೂ ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡ ಹೇಯ ಘಟನೆಯೊಂದು ರಾಜಸ್ತಾನದಿಂದ ವರದಿಯಾಗಿದೆ.
ಇಲ್ಲಿನ ಕರೌಲಿ ಜಿಲ್ಲೆಯ ಬಜ್ನಾ ಖುರ್ದ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಂಚಾಯಿತಿಯ ನಿರಂಕುಶ ಆಡಳಿತಕ್ಕೆ ಕುಟುಂಬವು ಬಲಿಯಾಗಿದೆ.
ಗಜೇಂದ್ರ ಆಲಿಯಾಸ್ ಗಜ್ಜು ಜಾತ್ (40) ಎಂಬ ವ್ಯಕ್ತಿ ಪಕ್ಕದ ಮನೆಯ ಕುನ್ವರ್ ದೇವಿ (35) ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗಿತ್ತು. ಇದೇ ಕಾರಣದಿಂದ ವಿಚಾರಣೆ ನಡೆಸಿದ ಪಂಚಾಯಿತಿ, ಕುಟುಂಬವು ಭಾರೀ ಮೊತ್ತದ ದಂಡವನ್ನು ಪಾವತಿಸುವಂತೆ ಆದೇಶ ನೀಡಿತ್ತು.
ಇದರಿಂದ ಬೆಚ್ಚಿ ಬಿದ್ದ ಇಡೀ ಕುಟುಂಬವು ಆತ್ಮಹತ್ಯೆಗೆ ಶರಣಾಗಿದೆ. ಗಜೇಂದ್ರ, ಆತನ ಪತ್ನಿ ಹೀರೂ ದೇವಿ (35), ಮಕ್ಕಳಾದ ರೋಹಿತ್ (6), ಚಂಚಲ (9) ಹಾಗೂ ಪ್ರೇಯಸಿ ಎಂದು ಹೇಳಲಾಗಿರುವ ಕುನ್ವರ್ ದೇವಿ ರೈಲಿಗೆ ತಲೆ ಕೊಟ್ಟವರು. ಗಜೇಂದ್ರನ ದೊಡ್ಡ ಮಗಳು ಮೋನಾ (11) ಎಂಬಾಕೆ ಇದರಲ್ಲಿ ಬದುಕುಳಿದಿದ್ದಾಳೆ.
ಆತ್ಮಹತ್ಯೆ ಮಾಡುದಕ್ಕಿಂತಲೂ ಮೊದಲು ಬರೆದಿಟ್ಟ ಪತ್ರದಲ್ಲಿ ಪಂಚಾಯತಿ ಸಮುದಾಯ ಬೇಡಿಕೆಯರಿಸಿಕೊಂಡಿರುವ ಹಣವನ್ನು ತನಗೆ ಪಾವತಿಸಲು ಸಾಧ್ಯವಾಗದೇ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಗಜೇಂದ್ರ ಬರೆದಿಟ್ಟಿದ್ದಾನೆ.
ಇದೀಗ ಎಚ್ಚೆತ್ತಿಕೊಂಡಿರುವ ಪೊಲೀಸರು ಘಟನೆಯ ಕುರಿತಂತೆ ಪ್ರಕರಣದ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಗಜೇಂದ್ರ ಸಹೋದರ ಭೂಪೇಂದ್ರ ಸಿಂಗ್ ಹೇಳುವಂತೆ, ಗಜೇಂದ್ರ ಹಣವನ್ನು ಪಾವತಿಸದಿದ್ದರೆ ಜಾತಿಯಿಂದಲೇ ಹೊರದಬ್ಬುವುದಾಗಿ ಪಂಚಾಯಿತಿ ಬೆದರಿಕೆಯೊಡ್ಡಿತ್ತು ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಪಂಚಾಯತಿಯ ನಿರಂಕುಶ ಆಡಳಿತ ಹಾಗೂ ಜಾತಿ ಪದ್ದತಿಗೆ ಮತ್ತೊಂದು ಕುಟುಂಬ ಬಲಿಯಾಗಿದೆ.