ಪಂಜಾಬ್ ವೈದ್ಯಕೀಯ ಕಾಲೇಜು ಒಂದಕ್ಕೆ ಮಾನ್ಯತೆ ನೀಡಲು ಎರಡು ಕೋಟಿ ರೂಪಾಯಿಗಳ ಲಂಚ ಸ್ವೀಕರಿಸಿದ ಆರೋಪದ ಮೇಲೆ ಗುರುವಾರ ತಡರಾತ್ರಿ ಭಾರತೀಯ ವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ. ಕೇತನ್ ದೇಸಾಯಿ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ.
ಪಂಜಾಬ್‌ನ ಕಾಲೇಜೊಂದಕ್ಕೆ ಮಾನ್ಯತೆ ನೀಡಲು ಎರಡು ಕೋಟಿ ರೂಪಾಯಿಗಳ ಲಂಚ ಕೇಳುತ್ತಿದ್ದಾರೆ ಎಂಬ ಮಾಹಿತಿಯ ನಂತರ ಗುರುವಾರ ರಾತ್ರಿ ಅವರ ಕಚೇರಿಗೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿತ್ತು. ಬಳಿಕ ದೇಸಾಯಿ ಮತ್ತು ಸಹಚರ ಜಿತೇಂದ್ರ ಪಾಲ್ ಸಿಂಗ್‌ರನ್ನು ಬಂಧಿಸಲಾಯಿತು ಎಂದು ಸಿಬಿಐ ವಕ್ತಾರ ಹರ್ಷಾ ಬಹಲ್ ತಿಳಿಸಿದ್ದಾರೆ.
ಇವರ ಮತ್ತೊಬ್ಬ ಸಹಚರ ಪಂಜಾಬ್‌ನ ಜ್ಞಾನ ಸಾಗರ್ ವೈದ್ಯಕೀಯ ಕಾಲೇಜಿನ ಡಾ. ಕನ್ವಾಲ್‌ಜೀತ್ ಸಿಂಗ್ ಎಂಬವರನ್ನು ಕೂಡ ಸಿಬಿಐ ಭ್ರಷ್ಟಾಚಾರ ಆರೋಪಗಳ ಮೇಲೆ ಬಂಧಿಸಿದೆ.
ಬಂಧಿತ ಮೂವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ದೆಹಲಿ ಮತ್ತು ಇತರೆಡೆಯ ಆರು ಕಡೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹರ್ಷಾ ತಿಳಿಸಿದರು.
ಎರಡು ಕೋಟಿ ರೂಪಾಯಿ ಲಂಚ ಕೇಳುತ್ತಿರುವ ದೂರು ಬಂದಿದ್ದ ಹಿನ್ನೆಲೆಯಲ್ಲಿ ದೇಸಾಯಿರನ್ನು ಸಿಬಿಐ ತನ್ನ ಬಲೆಗೆ ಹಾಕಿಕೊಂಡಿದೆ. ಈ ಸಂದರ್ಭದಲ್ಲಿ ದೇಸಾಯಿಯವರ ಇತರ ಸಹಚರರನ್ನು ಪತ್ತೆ ಹಚ್ಚಲು ದೆಹಲಿ, ಪಂಜಾಬ್ ಮತ್ತು ಗುಜರಾತ್‌ಗಳಲ್ಲೂ ದಾಳಿಗಳನ್ನು ನಡೆಸಿ ಶೋಧನೆ ನಡೆಸಿದೆ.
ಭಾರತದ ಅಥವಾ ವಿದೇಶಗಳ ವೈದ್ಯಕೀಯ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು ಅಥವಾ ಮಾನ್ಯತೆಯನ್ನು ರದ್ದು ಪಡಿಸುವುದು ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಪರಿಶೀಲನೆ ನಡೆಸುವ ಕಾರ್ಯವನ್ನು ಭಾರತೀಯ ವೈದ್ಯಕೀಯ ಪರಿಷತ್ ಮಾಡುತ್ತದೆ.