ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲ್ವೇ ಮೇಲೆ 2009ರಲ್ಲಿ ನಕ್ಸಲರಿಂದ 58 ದಾಳಿ: ಮಮತಾ (Naxal attacks | Rajya Sabha | Mamata Banerjee | Railway Minister)
ರೈಲ್ವೇ ಆಸ್ತಿ ಮೇಲೆ ವರ್ಷದಿಂದ ವರ್ಷಕ್ಕೆ ಮಾವೋವಾದಿಗಳಿಂದ ನಡೆಯುತ್ತಿರುವ ದಾಳಿಗಳು ಹೆಚ್ಚಾಗುತ್ತಿವೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, 2009ರಲ್ಲಿ 58 ರೈಲ್ವೇ ದಾಳಿಗಳು ನಡೆದಿವೆ ಮತ್ತು 500 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದರಲ್ಲದೆ ಮಾವೋವಾದಿಗಳು ರೈಲ್ವೇಯನ್ನು ಅತೀ ಹೆಚ್ಚು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಹೇಳಿದರು.
ನಕ್ಸಲರು ನಡೆಸಿದ ಬಂದ್ ಮತ್ತು ಇತರ ದುಷ್ಕೃತ್ಯಗಳಿಂದಾಗಿ ಇಲಾಖೆಗೆ ಸುಮಾರು 500 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದವರು ಹೇಳಿದರು. 2008ರಲ್ಲಿ 30ರಷ್ಟು ಇಂತಹ ಪ್ರಕರಣಗಳು ದಾಖಲಾಗಿದ್ದರೆ ಅದು 2009ರಲ್ಲಿ ಸರಿಸುಮಾರು ದ್ವಿಗುಣಗೊಂಡು 58ಕ್ಕೆ ಏರಿಕೆಯಾಗಿದೆ. 2007ರಲ್ಲಿ 56 ದಾಳಿ ಪ್ರಕರಣಗಳು ದಾಖಲಾಗಿದ್ದವು.
ದೇಶದ 65,000 ಕಿ.ಮೀ.ಗಳಷ್ಟು ವ್ಯಾಪ್ತಿಯಲ್ಲಿ ರೈಲ್ವೇ ಹಳಿಗಳಿದ್ದು, ಪ್ರತಿ ಇಂಚನ್ನು ರಕ್ಷಿಸಲು ಅಸಾಧ್ಯ. ನಮ್ಮಿಂದ ಎಷ್ಟು ತಡೆಯಲು ಸಾಧ್ಯವೋ, ಅಷ್ಟನ್ನು ನಾವು ಮಾಡುತ್ತೇವೆ ಎಂದರು.
ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಾವು ರಾಜ್ಯ ಸರಕಾರಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಹಾಗೆ ಮಾಡಿದಲ್ಲಿ ನಾವು ರೈಲುಗಳನ್ನು ಓಡಿಸಬಹುದಾಗಿದೆ ಎಂದರು.
ನಕ್ಸಲರು ನಡೆಸಿದ ಮುಷ್ಕರದಿಂದಾಗಿ ರೈಲ್ವೇಗೆ ಅತೀ ಹೆಚ್ಚು ಹಾನಿಯುಂಟಾಗಿದೆ. ಪ್ರಮುಖವಾಗಿ ಆಂಧ್ರ ಪ್ರದೇಶ, ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಚಂಡೀಗಢದಲ್ಲಿ ಹೆಚ್ಚಿನ ದಾಳಿ ನಡೆದಿದೆ.
ರಾಜಧಾನಿ ಹಾಗೂ ಇತರ ಪ್ರಯಾಣಿಕ ರೈಲುಗಳಲ್ಲಿಯೂ ಸುರಕ್ಷತೆಯನ್ನು ಕೈಗೊಳ್ಳಲಾಗಿದೆ. ಆದರೂ ಇಂತಹ ಟ್ರೈನುಗಳು ವೇಗ ಕಡಿತದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದವರು ಹೇಳಿದರು.