ಹಾಗೊಂದು ಸಂಶಯ ಹುಟ್ಟಿಕೊಂಡಿದೆ. ಕಳೆದ ಹಲವು ವರ್ಷಗಳಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಕಿಡಿ ಕಾರುತ್ತಿದ್ದ ಕಾಂಗ್ರೆಸ್, ಇದೀಗ ಆಕೆಯ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ಕೈ ಬಿಡುವ ಮುನ್ಸೂಚನೆ ನೀಡಿದೆ.
ಆದಾಯ ತೆರಿಗೆ ಇಲಾಖೆಯು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಪರ ತೀರ್ಪುಗಳನ್ನು ನೀಡಿರುವುದರಿಂದ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಕೈಬಿಡಬೇಕೆಂದು ಹೇಳಿರುವ ಅವರ ಮನವಿಯನ್ನು ಪರಿಗಣಿಸುವುದಾಗಿ ಸಿಬಿಐ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ತಾನು ಸ್ವೀಕರಿಸಿರುವ ಎಲ್ಲಾ ಹಣವೂ ಶುದ್ಧವಾಗಿ ಉಡುಗೊರೆಗಳು ಮತ್ತು ಈ ಸಂಬಂಧ ಆದಾಯ ತೆರಿಗೆ ಇಲಾಖೆಯು ನನ್ನನ್ನು ದೋಷಮುಕ್ತಳನ್ನಾಗಿಸಿದೆ ಎಂದು ಏಪ್ರಿಲ್ 20ರಂದು ಸಿಬಿಐಗೆ ಮಾಯಾವತಿ ಹೇಳಿಕೆ ನೀಡಿದ್ದರು.
ಮಾಯಾವತಿಯವರು ಮಾಡಿಕೊಂಡಿರುವ ವಿಜ್ಞಾಪನೆಗಾಗಿ ಇಡೀ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲನೆ ನಡೆಲು ಸಿಬಿಐಗ ಕಾಲಾವಕಾಶ ಬೇಕು ಎಂದು ಅಟಾರ್ನಿ ಜನರಲ್ ಜಿ.ಇ. ವಹನಾವತಿಯವರು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಾಧೀಶರುಗಳಾದ ಎ.ಕೆ. ಗಂಗೂಲಿ, ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ಪೀಠದೆದುರು ತಿಳಿಸಿದ್ದು, ಪ್ರಕರಣವನ್ನು ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ.
ಮೂರು ದಿನಗಳ ಹಿಂದಷ್ಟೇ ಮಾಯಾವತಿಯವರು ಅಹವಾಲು ಸಲ್ಲಿಸಿದ್ದು, ಇದರ ಕುರಿತು ಒಂದು ನಿರ್ಧಾರಕ್ಕೆ ಬರಲು ತನಿಖಾ ದಳಕ್ಕೆ ಒಂದಷ್ಟು ಸಮಯ ಬೇಕು ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಸ್ಫುಟತೆ ಮತ್ತು ಕಾನೂನು ತಜ್ಞರ ಸಲಹೆಯಂತೆ ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಮತ್ತು ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪ್ರಕರಣಗಳನ್ನು ಮುಕ್ತಾಯಗೊಳಿಸಿದಂತೆ ಅದೇ ರೀತಿಯ ನಿಯಮಾವಳಿಗಳಿಗೆ ತನ್ನನ್ನೂ ಪರಿಗಣಿಸಬೇಕು ಎಂದು ಸಿಬಿಐಗೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದರು.
ಅದೇ ಹೊತ್ತಿಗೆ ಸಿಬಿಐ ಮೇಲೆ ಮಾಯಾವತಿ ಕಿಡಿ ಕಾರಿದ್ದರು. ಮುಲಾಯಂ ಮತ್ತು ಲಾಲೂ ಅವರ ಪ್ರಕರಣಗಳನ್ನು ಅಂತ್ಯ ಕಾಣಿಸಿದ ಸಿಬಿಐ ಕೇಂದ್ರ ಸರಕಾರದ ಚಿತಾವಣೆಯಿಂದ ತನ್ನ ವಿರುದ್ಧದ ಪ್ರಕರಣವನ್ನು ಕೆದಕುತ್ತಾ ಮುಂದುವರಿಸುತ್ತಿದೆ ಎಂದು ಆರೋಪಿಸಿದ್ದರು.
ತಾಜ್ ಹೆರಿಟೇಜ್ ಕಾರಿಡಾರ್ ಹಗರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ 2003ರ ಅಕ್ಟೋಬರ್ ಐದರಂದು ನೀಡಿದ ಆದೇಶದ ನಂತರ ಮಾಯಾವತಿಯವರ ಅಕ್ರಮ ಆಸ್ತಿಯ ಕುರಿತು ಸಿಬಿಐ ತನಿಖೆ ಆರಂಭಿಸಿತ್ತು.
ತಾಜ್ ಕಾರಿಡಾರ್ ಹಗರಣದಲ್ಲಿ 17 ಕೋಟಿ ರೂಪಾಯಿಗಳು ತನ್ನ ಖಾತೆಗೆ ತಲುಪಿವೆ ಎಂಬುದನ್ನು ರುಜುವಾತು ಪಡಿಸಲು ಸಿಬಿಐ ವಿಫಲವಾಗಿದ್ದು, ಪ್ರಕರಣದಲ್ಲಿ ನಾನು ದೋಷಮುಕ್ತಳಾಗಿರುವುದರಿಂದ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದೂ ಮಾಯಾವತಿ ಕೇಳಿಕೊಂಡಿದ್ದರು.