ಅಡ್ವಾಣಿ 'ಪುತ್ರ'ನ ಕಾರು, ಪಿಸ್ತೂಲು ಮತ್ತು ಭಯೋತ್ಪಾದನೆ..!
ಮುಂಬೈ, ಶನಿವಾರ, 24 ಏಪ್ರಿಲ್ 2010( 12:11 IST )
ತಾನು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಪುತ್ರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ನಡೆದ ಆವಾಂತರವಿದು. ಪೆಟ್ರೋಲ್ ಪಂಪ್ ಒಂದರಲ್ಲಿ ಮಾಡಲಾಗಿದ್ದ ಕಾರಿನಲ್ಲಿ ಪಿಸ್ತೂಲನ್ನು ಕಂಡು ಬೆಚ್ಚಿ ಪೊಲೀಸರು ತಪಾಸಣೆಗೆ ತೊಡಗಿದ್ದರು. ಬಾಂಬ್ ಇರಬಹುದು ಎಂದು ಕಾರಿನ ಸೀಟುಗಳನ್ನು ಬಗೆದು ಹುಡುಕಿದರು. ಕೊನೆಗೂ ತಿಳಿದು ಬಂದ ವಿಚಾರವೆಂದರೆ ಅದು ಅಡ್ವಾಣಿ ಪುತ್ರನ ಕಾರು ಇದಲ್ಲ ಎಂಬುದು.
ಗುರುವಾರ ಬೆಳಿಗ್ಗೆ 10 ಗಂಟೆಯ ಹೊತ್ತು. ಸಂತಾ ಕ್ರೂಸ್ ವಿಮಾನ ನಿಲ್ದಾಣದ ಸಮೀಪದ ಪೆಟ್ರೋಲ್ ಪಂಪ್‌ಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಬಿಎಂಡಬ್ಲ್ಯೂ ಕಾರು (MH-43-V-5353) ಪಾರ್ಕಿಂಗ್ ಮಾಡಲು ಯತ್ನಿಸಿದ್ದಾನೆ. ಮ್ಯಾನೇಜರ್ ಆಕ್ಷೇಪಿಸಿದಾಗ ತಾನು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮಗನೆಂದೂ, ಪೊಲೀಸ್ ಅಧಿಕಾರಿಯೆಂದೂ ಹೇಳಿದ್ದಾನೆ. ಅರ್ಜೆಂಟಾಗಿ ದೆಹಲಿಗೆ ಹೋಗಬೇಕಾಗಿದೆ ಎಂದು ಸಂತಾ ಕ್ರೂಸ್ ವಿಮಾನ ನಿಲ್ದಾಣದತ್ತ ಓಡಿದ್ದ ವ್ಯಕ್ತಿ ಸ್ವಲ್ಪವೇ ಹೊತ್ತಿನಲ್ಲಿ ಕಾಣೆ.
ಆ ವ್ಯಕ್ತಿ ಅಲ್ಲಿಂದ ಕಾಲ್ಕೀಳುವುದಕ್ಕೂ ಮೊದಲು ಪೆಟ್ರೋಲ್ ಪಂಪಿನ ಹುಡುಗನನ್ನು ಕರೆದು, ತನ್ನ ಕಾರಿನ ಕೀಯನ್ನು ಕೊಟ್ಟಿದ್ದ. ಅಲ್ಲದೆ ಪಕ್ಕದ ಯಾವುದಾದರೂ ಪಂಚತಾರಾ ಹೊಟೇಲಿನ ಪಾರ್ಕಿಂಗ್‌ನಲ್ಲಿ ಕಾರನ್ನು ಪಾರ್ಕ್ ಮಾಡಿ ಬಿಡು ಎಂದು ಹೇಳಿದ್ದ.
ಪಂಪ್ ಹುಡುಗನೂ ಆತಂಕಗೊಂಡಿದ್ದ. ಮ್ಯಾನೇಜರ್ ಕೂಡ. ಇದಕ್ಕಿದ್ದ ಕಾರಣ ಕಾರಿನ ಎದುರುಗಡೆ 'ಪ್ರೆಸ್' ಅಂತ ಬೋರ್ಡ್ ಇದ್ದುದು ಮತ್ತು ಕಾರಿನ ಒಳಗಡೆ ಪೊಲೀಸ್ ಸಮವಸ್ತ್ರ ಇದ್ದುದು. ಜತೆಗೆ ಪೊಲೀಸ್ ಎಂದು ದೊಡ್ಡದಾಗಿ ಬರೆದ ನೇಮ್ ಪ್ಲೇಟ್ ಕೂಡ ಕಾರಿನ ಒಳಗಿತ್ತು. ಮಾತ್ರವಲ್ಲ ಒಳಗೆ ಒಂದು ಪಿಸ್ತೂಲು ಕೂಡ ಇತ್ತು!
ಬೆಚ್ಚಿದ ಪಂಪ್ ಮ್ಯಾನೇಜರ್ ಪೊಲೀಸರಿಗೆ ಫೋನ್ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಕಾರಿನೊಳಗಿದ್ದ ಡ್ರೈ ಫ್ರ್ಯೂಟ್ಸ್ (ಒಣ ಹಣ್ಣು)ಗಳನ್ನು ನೋಡಿ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಈ ಹಿಂದೆ 2008ರಲ್ಲಿ ಮುಂಬೈ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರು ಕೂಡ ತಮ್ಮ ಸಾಮರ್ಥ್ಯ ಕುಸಿಯದಂತೆ ಒಣ ಹಣ್ಣುಗಳನ್ನೇ ಸೇವಿಸಿದ್ದರು.
ಭಯೋತ್ಪಾದಕನಿರಬಹುದು ಎಂಬ ಶಂಕೆಯಲ್ಲಿ ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕಾಗಮಿಸಿತು. ಪೊಲೀಸರು, ಇತರ ತನಿಖಾ ದಳಗಳೂ ಸೇರಿ ಇಡೀ ಕಾರನ್ನು ಪರಿಶೀಲನೆ ನಡೆಸಿದರು. ಕಾರಿನ ಸೀಟುಗಳನ್ನು ಬಗೆದು ಬಾಂಬ್ ಏನಾದರೂ ಇಡಲಾಗಿದೆಯೇ ಎಂದು ತಪಾಸಣೆ ನಡೆಸಿದರು.
ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಲಿಲ್ಲ. ಅಲ್ಲದೆ ಕಾರಿನಲ್ಲಿದ್ದ ಪಿಸ್ತೂಲು, ಪ್ರೆಸ್-ಪೊಲೀಸ್ ಸ್ಟಿಕ್ಕರುಗಳು, ಪೊಲೀಸ್ ಸಮವಸ್ತ್ರ ಇವೆಲ್ಲವೂ ಚಲನಚಿತ್ರಕ್ಕಾಗಿ ಬಳಸುವ ನಕಲಿಗಳೆಂದು ತಿಳಿದು ಬಂತು. ಕಾರಿನ ನಂಬರನ್ನು ನೋಡಿ ದಾಖಲೆಗಳನ್ನು ಪರಿಶೀಲಿಸಿದಾಗ ಇದು ಅಂಧೇರಿಯ ನಿವಾಸಿ 54ರ ಹರೆಯದ ಈಶ್ವರ್ ಅಡ್ವಾಣಿ ಎಂಬ ವ್ಯಕ್ತಿಯ ಕಾರು ಎಂಬುದು ಬೆಳಕಿಗೆ ಬಂತು.
ಈಶ್ವರ್ ಅಡ್ವಾಣಿಯ ಆವಾಂತರಕ್ಕಾಗಿ ಇದೀಗ ಹಲವು ಕೇಸುಗಳನ್ನು ಜಡಿಯಲಾಗಿದೆ. ಸಾರ್ವಜನಿಕ ಸೇವಕನಂತೆ ನಡೆದುಕೊಂಡಿರುವುದಕ್ಕಾಗಿ ಸೆಕ್ಷನ್ 170ರ ಅಡಿಯಲ್ಲಿ, ಸಾರ್ವಜನಿಕ ಸೇವಕರು ಬಳಸುವ ಸ್ಟಿಕ್ಕರ್ ಅಥವಾ ದಿರಿಸುಗಳನ್ನು ಮೋಸದ ಉದ್ದೇಶಕ್ಕಾಗಿ ಬಳಸಿರುವುದಕ್ಕಾಗಿ ಸೆಕ್ಷನ್ 171ರಡಿಯಲ್ಲಿ ಹಾಗೂ ಅತಿಕ್ರಮ ಪ್ರವೇಶಕ್ಕಾಗಿ ಸೆಕ್ಷನ್ 447ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಈಶ್ವರ್ ಅಡ್ವಾಣಿಗೆ ಯಾವುದೇ ಸಂಬಂಧವಿಲ್ಲ ಎಂದೂ ಪೊಲೀಸರು ಸ್ಪಷ್ಟಪಡಿಸಿದ್ದು, ದೆಹಲಿಗೆ ಹೋಗಿರುವ ಅಡ್ವಾಣಿ ಮುಂಬೈಗೆ ವಾಪಸ್ ಬಂದ ಕೂಡಲೇ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.