ಆಸ್ತಿ ವಿವರಗಳನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಕೇಂದ್ರ ಸಚಿವ ಆರ್.ಪಿ.ಎನ್. ಸಿಂಗ್, ಲಾಲೂ ಪ್ರಸಾದ್ ಯಾದವ್, ಕಲ್ಯಾಣ್ ಸಿಂಗ್ ಮತ್ತು ಬಾಬುಲಾಲ್ ಮರಾಂಡಿ ಸೇರಿದಂತೆ 51 ಸಂಸದರಿಗೆ ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಸೂಚನೆ ನೀಡಿದ್ದು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಹಲವು ರಾಜಕೀಯ ಪಕ್ಷಗಳಿಗೆ ಪತ್ರಗಳನ್ನು ರವಾನಿಸಲಾಗಿದ್ದು, ತಮ್ಮ ಪಕ್ಷದ ಸಂಸತ್ ಸದಸ್ಯರ ಸಂಪತ್ತಿನ ವಿವರಗಳನ್ನು ಆದಷ್ಟು ಬೇಗನೆ ಸಲ್ಲಿಸುವಂತೆ ಕೇಳಿಕೊಳ್ಳಲಾಗಿದೆ.
ಉದ್ದೇಶಪೂರ್ವಕವಾಗಿ ಯಾವುದೇ ನಿಯಮಗಳನ್ನು ಉಲ್ಲಂಘಿಸುವುದು ಸದನದ ಗೌರವವನ್ನು ಮಣ್ಣುಪಾಲು ಮಾಡುವ ಕೃತ್ಯವೆಂದೇ ಪರಿಗಣಿಸಲಾಗುತ್ತದೆ ಎಂದು ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಡಿಎಂಕೆ, ಎನ್‌ಸಿಪಿ ಮತ್ತು ಆರ್‌ಜೆಡಿ ಸಹಿತ ಇತರ ಕೆಲವು ಪಕ್ಷಗಳಿಗೆ ಕಳುಹಿಸಲಾಗಿರುವ ಪತ್ರದಲ್ಲಿ ಮೀರಾ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆಸ್ತಿ ವಿವರಗಳನ್ನು ನೀಡಲು ವಿಫಲರಾದವರಲ್ಲಿ ತೃಣಮೂಲ ಕಾಂಗ್ರೆಸ್‌ನ ತಪಸ್ ಪಾಲ್, ದಿಗ್ವಿಜಯ್ ಸಿಂಗ್ (ಸ್ವತಂತ್ರ) ಮತ್ತು ಕಾಂಗ್ರೆಸ್‌ನ ದೀಪೇಂದರ್ ಸಿಂಗ್ ಹೂಡಾ, ರಾವ್ ಇಂದ್ರಜಿತ್ ಸಿಂಗ್, ಅವತಾರ್ ಸಿಂಗ್ ಬದಾನಾ, ಸಂಜಯ್ ಸಿಂಗ್, ದೀಪಾ ದಾಸ್‌ಮುನ್ಶಿ ಮತ್ತು ಪೂನಂಪ್ರಭಾಕರ್‌ರವರೂ ಕೂಡಾ ಸೇರಿದ್ದಾರೆ.
ಈ ಬಗ್ಗೆ ಪಕ್ಷದ ಸದಸ್ಯರು ಆದಷ್ಟು ಬೇಗನೆ ವಿವರಗಳನ್ನು ಸಲ್ಲಿಸುವಂತೆ ರಾಜಕೀಯ ಪಕ್ಷಗಳಲ್ಲಿ ಕೇಳಿಕೊಳ್ಳಲಾಗಿದೆ ಎಂದವರು ಹೇಳಿದರು.
ಸಂಸದರು ಪ್ರಮಾಣ ವಚನ ಸ್ವೀಕರಿಸಿದ 90 ದಿನಗಳೊಳಗೆ ತಮ್ಮ ಅಸ್ತಿ ವಿವರಗಳನ್ನು ಸಂಸತ್‌ಗೆ ಸಲ್ಲಿಸಬೇಕಾಗುತ್ತದೆ. ಆದರೆ ಇದೀಗ 15ನೇ ಲೋಕಸಭೆ ರಚನೆಯಾಗಿ ವರ್ಷವಾದರೂ ವಿವರಗಳನ್ನು ನೀಡುವಲ್ಲಿ ಸಂಸದರು ವಿಫಲರಾಗಿದ್ದಾರೆ.