ಪ್ರಸಕ್ತ ಅರ್ಧ ಕೋಟಿ ಮೀರಿರುವ ಬೆಂಗಳೂರಿನ ಜನಸಂಖ್ಯೆ 2030ರ ವೇಳೆಗೆ ಒಂದು ಕೋಟಿ ದಾಟಲಿದೆ ಮತ್ತು ಕರ್ನಾಟಕದ ಶೇ.50ಕ್ಕೂ ಹೆಚ್ಚು ಭಾಗಗಳು ನಗರೀಕರಣಕ್ಕೆ ತುತ್ತಾಗಲಿವೆ. ನಗರೀಕರಣದ ಪರಿಣಾಮ ಬೆಂಗಳೂರು ಸಹಿತ ಒಟ್ಟಾರೆ ದೇಶದ ಬಹುಭಾಗವು ಈ ಹೊತ್ತಿಗೆ ನೀರಿನ ಸಮಸ್ಯೆ ಮತ್ತು ವಿಲೇವಾರಿಯಾಗದ ಕೊಚ್ಚೆಗಳಿಗೆ ಸಾಕ್ಷಿಯಾಗಲಿದೆ.
'ಮೆಕ್‌ಕಿನ್ಸಿ & ಕಂಪನಿ' ನಡೆಸಿರುವ ಸಮೀಕ್ಷೆ ಪ್ರಕಾರ ಭಾರತದ ನಗರಗಳ ಜನಸಂಖ್ಯಾ ಪ್ರಮಾಣ 2008ರಲ್ಲಿದ್ದ 34 ಕೋಟಿಗಳಿಂದ 2030ರ ಹೊತ್ತಿಗೆ 59 ಕೋಟಿ ಅಂದರೆ ದೇಶದ ಒಟ್ಟು ಜನಸಂಖ್ಯೆಯ ಶೇ.40ರಷ್ಟು ಏರಿಕೆಯಾಗಲಿದೆ. ಇದು ಅಮೆರಿಕಾದ ಒಟ್ಟು ಜನಸಂಖ್ಯೆಯ ಎರಡು ಪಟ್ಟು.
ನಗರೀಕರಣದ ಪರಿಣಾಮಗಳಾದ ನೀರಿನ ಕೊರತೆ, ಕಸ ವಿಲೇವಾರಿ ಸಮಸ್ಯೆ, ಕೊಚ್ಚೆ ಮುಂತಾದುವುದರ ಜತೆ ವೇಗವಾಗಿ ಸಾಗಲು ಭಾರತ 54,00,000 ಕೋಟಿ ರೂಪಾಯಿಗಳನ್ನು ವ್ಯಯಿಸಿದಲ್ಲಿ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಭಾರತವು ನಗರಗಳ ಮೂಲಭೂತ ವ್ಯವಸ್ಥೆಗಾಗಿ ಪ್ರತಿ ಪ್ರಜೆಯ ಮೇಲೆ 784 ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದೇ ವಿಚಾರದಲ್ಲಿ ಚೀನಾ 6,030 ರೂಪಾಯಿಗಳನ್ನು ವ್ಯಯಿಸುತ್ತಿದೆ. ಅಂದರೆ ಭಾರತವು ಚೀನಾದ ಶೇ.14ರಷ್ಟು ಮೊತ್ತವನ್ನು ಮಾತ್ರ ನಗರಗಳ ಮೂಲಭೂತ ವ್ಯವಸ್ಥೆಗಾಗಿ ಪ್ರತಿ ಪ್ರಜೆಯ ಮೇಲೆ ವೆಚ್ಚ ಮಾಡುತ್ತಿದೆ.
ಅದೇ ಹೊತ್ತಿಗೆ ಪ್ರಸಕ್ತ ಹೊಂದಿರುವ ಸೇವೆಗಳು ಗಮನಾರ್ಹ ಪ್ರಮಾಣದಲ್ಲಿ ಸುಧಾರಣೆ ಕಾಣದಿದ್ದರೆ ನಗರದ ಪ್ರತಿ ವ್ಯಕ್ತಿ ಪ್ರತಿ ದಿನ ಪಡೆಯುವ ನೀರಿನ ಪ್ರಮಾಣ 105 ಲೀಟರುಗಳಿಂದ ಮುಂದಿನ 20 ವರ್ಷಗಳಲ್ಲಿ 65 ಲೀಟರುಗಳಿಗೆ ಕುಸಿತವಾಗಲಿದೆ.
ಈ ಅಂಕಿ ಅಂಶಗಳ ಪ್ರಕಾರ 2030ರ ಹೊತ್ತಿಗೆ ದೇಶದ 13 ನಗರಗಳ ಜನಸಂಖ್ಯೆ 40 ಲಕ್ಷ ಮೀರಲಿದೆ. ಮುಂಬೈ 3.3 ಕೋಟಿ, ದೆಹಲಿ 2.59 ಕೋಟಿ, ಕೊಲ್ಕತ್ತಾ 2.29 ಕೋಟಿ, ಚೆನ್ನೈ 1.1 ಕೋಟಿ, ಬೆಂಗಳೂರು 1.01 ಕೋಟಿ, ಪುಣೆ 1 ಕೋಟಿ, ಹೈದರಾಬಾದ್ 98 ಲಕ್ಷ, ಅಹಮದಾಬಾದ್ 84 ಲಕ್ಷ, ಸೂರತ್ 74 ಲಕ್ಷ, ಜೈಪುರ 54 ಲಕ್ಷ, ನಾಗ್ಪುರ 52 ಲಕ್ಷ, ಕಾನ್ಪುರ ಮತ್ತು ವಡೋದರಗಳು 42 ಲಕ್ಷ ಜನಸಂಖ್ಯೆಯನ್ನು ದಾಟಲಿವೆ ಎಂದು ಅಂದಾಜಿಸಲಾಗಿದೆ.
ಭಾರತದ ಐದು ರಾಜ್ಯಗಳು ಈ ಹೊತ್ತಿಗೆ ಶೇ.50ಕ್ಕಿಂತಲೂ ಹೆಚ್ಚು ನಗರೀಕರಣಕ್ಕೆ ಒಳಗಾಗಲಿವೆ. ಆ ಮೂಲಕ ಭಾರೀ ಸಮಸ್ಯೆಗಳನ್ನು ದೇಶ ಎದುರಿಸಬೇಕಾಗುತ್ತದೆ. ತಮಿಳುನಾಡಿನ ನಗರ ಪ್ರದೇಶದ ಜನಸಂಖ್ಯೆಯು ಪ್ರಸಕ್ತ ಇರುವ ಶೇ.53ರಿಂದ (3.54 ಕೋಟಿ) 67ಕ್ಕೆ (5.34 ಕೋಟಿ), ಗುಜರಾತ್ ಶೇ.44ರಿಂದ (2.52 ಕೋಟಿ) ಶೇ.66ಕ್ಕೆ (4.8 ಕೋಟಿ), ಮಹಾರಾಷ್ಟ್ರ ಶೇ.44ರಿಂದ (4.79 ಕೋಟಿ) ಶೇ.58ಕ್ಕೆ (7.81 ಕೋಟಿ), ಕರ್ನಾಟಕ ಶೇ.37ರಿಂದ (2.16 ಕೋಟಿ) 57ಕ್ಕೆ (3.96 ಕೋಟಿ) ಮತ್ತು ಪಂಜಾಬ್ ಶೇ.36ರಿಂದ (1 ಕೋಟಿ) 52ಕ್ಕೆ (1.9 ಕೋಟಿ) ಏರಿಕೆಯಾಗಲಿದೆ.