1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು ವಶಕ್ಕೆ ಪಡೆಯುವ ಭರವಸೆ ನಮ್ಮಲ್ಲಿದೆ ಎಂದು ಕೇಂದ್ರೀಯ ತನಿಖಾ ದಳ ನಿರ್ದೇಶಕ ಅಶ್ವಿನಿ ಕುಮಾರ್ ಶನಿವಾರ ತಿಳಿಸಿದ್ದಾರೆ.
ಮುಂಬೈ ಬಾಂಬ್ ಸ್ಫೋಟದ ನಂತರ ಈ ಘಟನೆಗೆ ಕಾರಣರಾದ 123 ಆರೋಪಿಗಳಲ್ಲಿ 100 ಮಂದಿಯ ಕೃತ್ಯಗಳು ಸಾಬೀತುಗೊಂಡಿವೆ. ದಾವೂದ್ ಸೇರಿದಂತೆ 37 ಮಂದಿ ದೋಷಿಗಳು ಇನ್ನೂ ಪತ್ತೆಯಾಗಿಲ್ಲ. ದಾವೂದ್ ನಮ್ಮ ಗುರಿಯಲ್ಲೇ ಇದ್ದಾನೆ. ಆತ ಇಂಟರ್ಪೋಲ್ ಮತ್ತು ವಿಶ್ವಸಂಸ್ಥೆಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲೂ ಇದ್ದಾನೆ ಎಂದು ಕುಮಾರ್ ವಿವರಣೆ ನೀಡಿದ್ದಾರೆ.
ಎಲ್ಲಾ ಪೊಲೀಸ್ ಪಡೆಗಳು ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳು ಹತ್ತಿರ ಬರುತ್ತಿವೆ. ಹಾಗಾಗಿ ದಾವೂದ್‌ನನ್ನು ವಶಕ್ಕೆ ಪಡೆಯುವ ವಿಶ್ವಾಸ ನಮ್ಮಲ್ಲಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ ದಾವೂದ್ ಇಬ್ರಾಹಿಂ ಭೂಗತ ದೊರೆಯಾಗಿ ಮುಂಬೈ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ತನ್ನ 'ಡಿ-ಕಂಪನಿ' ಮೂಲಕ ಕುಕೃತ್ಯಗಳನ್ನು ನಡೆಸುತ್ತಾ ಬರುತ್ತಿದ್ದು, ಪ್ರಸಕ್ತ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ಆದರೆ ಇದನ್ನು ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ.
ಈ ನಡುವೆ ಮಾಧ್ಯಮಗಳು ಭ್ರಷ್ಟಾಚಾರಗಳ ವರದಿಯಲ್ಲಿ ಇನ್ನೂ ಹೆಚ್ಚಿನ ಚುರುಕುತನ ತೋರಿಸಬೇಕು ಎಂದು ಸಿಬಿಐ ನಿರ್ದೇಶಕರು ಪತ್ರಕರ್ತರಿಗೆ ಮನವಿ ಮಾಡಿದ್ದಾರೆ.
ನಿಮ್ಮ ಪ್ರಾಮಾಣಿಕತೆ ಮತ್ತು ಕಟ್ಟೆಚ್ಚರಗಳು ಭ್ರಷ್ಟ ಪಡೆಗಳನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂತಹ ಭ್ರಷ್ಟಾಚಾರ ಪ್ರಕರಣಗಳು ನಿಮ್ಮ ಗಮನಕ್ಕೆ ಬಂದಾಗ ಅದರ ಕುರಿತು ಜಾಗೃತಿ ಮೂಡಿಸುವ ಯತ್ನ ಮಾಧ್ಯಮಗಳ ಮೂಲಕ ನಡೆಯಲಿ. ಸರಕಾರ, ಸಂಸತ್, ನ್ಯಾಯಾಂಗ ಮತ್ತು ಮಾಧ್ಯಮಗಳ ಜತೆ ಸೇರಿ ನಾವು ಭ್ರಷ್ಟಾಚಾರ ಮತ್ತಿತರ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂದು ಅವರು ತಿಳಿಸಿದ್ದಾರೆ.