ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಛೇ...ಬಿಜೆಪಿ ಮುಸ್ಲಿಮ್ ವಿರೋಧಿಯಲ್ಲ: ಗಡ್ಕರಿ ಉವಾಚ (Muslims | Nitin Gadkari | Parliament | Babri Masjid | Ayodhya)
'ನಾವು ಮುಸ್ಲಿಮರ ವಿರೋಧಿಯಲ್ಲ, ಅಲ್ಲದೇ ಬಿಜೆಪಿ ಕೋಮುವಾದಿಯಾಗಲಿ, ಜಾತಿ ಆಧಾರಿತ ಪಕ್ಷವಲ್ಲ ಎಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ನಾವು ಕೇವಲ ಭಯೋತ್ಪಾದಕರ ವಿರೋಧಿಗಳು ಎಂದು ತಿಳಿಸಿದ್ದಾರೆ.
ಭಾನುವಾರ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಅವರು, ಬಿಜೆಪಿ ಯಾವುದೇ ಧರ್ಮದ ವಿರೋಧಿಯಲ್ಲ, ಪಕ್ಷ ಆಕಸ್ಮಿಕ ಮುಸ್ಲಿಮ್ ವಿರೋಧಿಯಾಗಿ ಹಾದಿ ತುಳಿಯಬೇಕಾಯಿತು ಎಂದು ಹೇಳಿದರು. ಆದರೆ ಇದು ಹಿಂದುತ್ವದ ತಪ್ಪು ಎಂದು ಹೇಳಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ ಗಡ್ಕರಿ, ಸಮಾನ ನಾಗರಿಕತೆ, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವಿಷಯದಲ್ಲಿ ಬಿಜೆಪಿ ಯಾವುದೇ ರಾಜೀ ಸಂಧಾನ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾವನೆ ಮತ್ತು ವಾಸ್ತವಾಂಶಗಳೇ ಬಿಜೆಪಿಯ ಮುಖ್ಯವಾದ ಸಮಸ್ಯೆಯಾಗಿದೆ ಎಂದ ಗಡ್ಕರಿ, ಇದೊಂದು ಆಕಸ್ಮಿಕ ಎಂದರು. ಕಾಂಗ್ರೆಸ್ ವಿರುದ್ಧ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ ಅವರು, ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಮುಸ್ಲಿಮ್ ಎಂಬ ಕಾರಣಕ್ಕಾಗಿಯೇ ಆತನನ್ನು ನೇಣುಗಂಬಕ್ಕೆ ಏರಿಸದೆ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.
ಅಲ್ಲದೇ ಪಕ್ಷದ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಮುಸ್ಲಿಮರನ್ನು ಪಕ್ಷದತ್ತ ಸೆಳೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ನಿಜಕ್ಕೂ ನಾವು ಮುಸ್ಲಿಮರ ವಿರೋಧಿಯಲ್ಲ, ಪಕ್ಷ ಮುಸ್ಲಿಮರನ್ನು ತಲುಪುವ ಕೆಲಸ ಮಾಡುತ್ತೆ ಎಂದರು. ಹಾಗಾಗಿ ಇಸ್ಲಾಮ್ ಸಮುದಾಯದ ಜನರು ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳಬೇಕೆಂಬ ಇಚ್ಛೆ ಹೊಂದಿದೆ ಎಂದರು. ಮುಸ್ಲಿಮ್ ಸಮುದಾಯದಲ್ಲಿನ ಹಸಿವು, ಬಡತನ ಮತ್ತು ಶಿಕ್ಷಣದ ಕೊರತೆಯನ್ನು ನೀಗಿಸುವ ಯೋಜನೆ ಹೊಂದಿರುವುದಾಗಿಯೂ ಗಡ್ಕರಿ ಹೇಳಿದರು.
ಬಾಬ್ರಿ ಧ್ವಂಸ ಆಕಸ್ಮಿಕ ಘಟನೆ: ಮುಸ್ಲಿಮ್ ಮತಗಳನ್ನು ಸೆಳೆಯುವ ತಂತ್ರದಲ್ಲಿ ಮುಂದಡಿ ಇಡುತ್ತಿರುವ ಗಡ್ಕರಿ, ಬಾಬ್ರಿ ಮಸೀದಿ ಧ್ವಂಸ ಆಕಸ್ಮಿಕ ಘಟನೆಯಾಗಿದೆ ಎಂದರು. ನಿಜಕ್ಕೂ ವಿವಾದಿತ ಭಾಗವನ್ನು ಒಡೆಯಲಾಗಿದೆಯೇ ವಿನಃ ಮಸೀದಿಯನ್ನು ಧ್ವಂಸಗೊಳಿಸಿಲ್ಲ ಎಂದು ತಿಳಿಸಿದರು.
ಅಯೋಧ್ಯೆ ವಿವಾದ ಕೇವಲ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿಲ್ಲ, ಯಾಕೆಂದರೆ ಅದು ಕೋಟ್ಯಂತರ ಹಿಂದೂಗಳ ನಂಬಿಕೆಯ ಪ್ರಶ್ನೆಯಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಈ ವಿವಾದದ ಕುರಿತಂತೆ ಒಮ್ಮತದಿಂದ ಸಹಮತ ವ್ಯಕ್ತಪಡಿಸಬೇಕು. ಆದರೆ ಪ್ರತಿಯೊಂದು ಪಕ್ಷಗಳು ಅದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ವಿಷಾಧಿಸಿದರು.