ದುಬೈನಿಂದ ಕೊಚ್ಚಿಗೆ ಆಗಮಿಸುತ್ತಿದ್ದ ಎಮಿರೇಟ್ಸ್ ವಿಮಾನವೊಂದು ದಿಢೀರನೆ ಸುಮಾರು 15ಸಾವಿರ ಅಡಿಯ ಆಳಕ್ಕೆ ಇಳಿದಾಗ ಪ್ರಯಾಣಿಕರೆಲ್ಲಾ ಮುಗಿಯಿತು ತಮ್ಮ ಬದುಕು ಎಂದುಕೊಳ್ಳುತ್ತಿದ್ದರಷ್ಟರಲ್ಲಿಯೇ ಪೈಲಟ್‌ನ ಸಮಯಪ್ರಜ್ಞೆಯಿಂದ ಪವಾಡ ಸದೃಶ ಪಾರಾದ ಘಟನೆ ಭಾನುವಾರ ನಡೆದಿದ್ದು, ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ.
ವಿಮಾನ ಏಕಾಏಕಿ ಆಳಕ್ಕೆ ಇಳಿಯುತ್ತಿದ್ದುದನ್ನು ಕಂಡು ಹಲವು ಪ್ರಯಾಣಿಕರು ಕಾಪಾಡಿ, ಕಾಪಾಡಿ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಸುಮಾರು ಮೂರು ನಿಮಿಷಗಳ ಕಾಲ ಏನು ನಡೆಯುತ್ತಿದೆ ಎಂಬುದೇ ಪ್ರಯಾಣಿಕರಿಗೆ ತೋಚದ ಸಂಗತಿಯಾಗಿತ್ತು. ಕೆಲವು ಪ್ರಯಾಣಿಕರು ತಮ್ಮ ಸೀಟಿನಿಂದ ಉರುಳಿದ್ದರು. ಕೆಲವರು ವಿಮಾನದ ಮೇಲ್ಭಾಗದಲ್ಲಿನ ಹಿಡಿಕೆ ಆಧಾರವಾಗಿ ಹಿಡಿದುಕೊಂಡಿದ್ದರು. ವಿಮಾನದ ಓಲಾಟಕ್ಕೆ ಮಗುವೊಂದು ಸೀಟಿನಿಂದ ಎಗರಿ ಕೆಳಕ್ಕೆ ಬಿದ್ದಿತ್ತು. ಒಟ್ಟಾರೆ ನಮ್ಮೆಲ್ಲರ ಜೀವ ಅಂತ್ಯಗೊಂಡಂತೆ ಎಂದು ಭಾವಿಸಿದ್ದೇವೆ ಎಂಬುದಾಗಿ ಘಟನೆಯಿಂದ ಪಾರಾದ ನಂತರ ಪ್ರಯಾಣಿಕರಿಂದ ಹೊರಬಿದ್ದ ಉದ್ಘಾರ ಇದಾಗಿತ್ತು.
ಎಮಿರೇಟ್ಸ್ ವಿಮಾನದಲ್ಲಿ 375 ಮಂದಿ ಪ್ರಯಾಣಿಕರಿದ್ದರು. ಇಂದು ಬೆಳಿಗ್ಗೆ 7ಗಂಟೆಗೆ ಈ ಘಟನೆ ನಡೆದಿತ್ತು. ಅಂತೂ ಪೈಲಟ್ ಸಮಯಪ್ರಜ್ಞೆಯಿಂದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿತ್ತು. ತದ ನಂತರ ವೈದ್ಯರು ಎಲ್ಲಾ ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದರು. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಯಿತು.
ಈ ಘಟನೆ ಕುರಿತಂತೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ತನಿಖೆ ನಡೆಸಲಿದೆ ಎಂದು ಎಮಿರೇಟ್ಸ್ ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.