ಮತದಾರರನ್ನು ಸೆಳೆಯಲು ಹಲವಾರು ತಂತ್ರಗಳನ್ನು ಹೂಡುತ್ತಿರುವ ಬಿಜೆಪಿ ಒಂದೊಂದೇ ಅಸ್ತ್ರಗಳನ್ನು ನೂತನವಾಗಿ ಪ್ರಯೋಗಿಸುತ್ತಿದೆ. ಆ ನಿಟ್ಟಿನಲ್ಲಿ ಹೊಸ ಸೇರ್ಪಡೆ ಎಂಬಂತೆ ಕೋಟ್ಯಂತರ ಹಿಂದೂಗಳ ಪಾಲಿಗೆ ಪವಿತ್ರವಾಗಿರುವ ಕುಂಭಮೇಳಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಚಳವಳಿ ನಡೆಸಲು ಬಿಜೆಪಿ ಸಿದ್ದತೆ ನಡೆಸಿದೆ.
ಹರಿದ್ವಾರದಲ್ಲಿ ನಡೆಯುವ ಮಹಾಕುಂಭ ಮೇಳಕ್ಕೆ ಈ ಪ್ರಶಸ್ತಿ ನೀಡಲು ಉತ್ತರಾಖಂಡ ಬಿಜೆಪಿ ಸರ್ಕಾರ ಒತ್ತಾಯಿಸಿದ್ದು, ಪ್ರತಿವರ್ಷ ವಿಶ್ವದ ಸುಮಾರು 104 ರಾಷ್ಟ್ರಗಳಿಂದ ಐದು ಕೋಟಿ ಜನ ಈ ಪವಿತ್ರ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಆ ನೆಲೆಯಲ್ಲಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಗೆ ಒತ್ತಡ ಹೇರುವಂತೆ ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬಿಷನ್ ಸಿಂಗ್ ಚುಪಾಲ್ ತಿಳಿಸಿದ್ದಾರೆ.
ಏತನ್ಮಧ್ಯೆ ಕಾಂಗ್ರೆಸ್ ಕುಂಭಮೇಳಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಚಳವಳಿಗೆ ಮುಂದಾಗುವುದು ಹಾಸ್ಯಾಸ್ಪದ ವಿಷಯ ಎಂದು ವ್ಯಂಗ್ಯವಾಡಿದೆ.
ಏತನ್ಮಧ್ಯೆ 'ನಾವು ಮುಸ್ಲಿಮರ ವಿರೋಧಿಯಲ್ಲ, ಅಲ್ಲದೇ ಬಿಜೆಪಿ ಕೋಮುವಾದಿಯಾಗಲಿ, ಜಾತಿ ಆಧಾರಿತ ಪಕ್ಷವಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಭಾನುವಾರ ತಿಳಿಸಿದ್ದು, ನಾವು ಕೇವಲ ಭಯೋತ್ಪಾದಕರ ವಿರೋಧಿಗಳು ಎಂದಿದ್ದರು.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ್ದ ಅವರು, ಬಿಜೆಪಿ ಯಾವುದೇ ಧರ್ಮದ ವಿರೋಧಿಯಲ್ಲ, ಪಕ್ಷ ಆಕಸ್ಮಿಕ ಮುಸ್ಲಿಮ್ ವಿರೋಧಿಯಾಗಿ ಹಾದಿ ತುಳಿಯಬೇಕಾಯಿತು ಎಂದಿದ್ದರು. ಆದರೆ ಇದು ಹಿಂದುತ್ವದ ತಪ್ಪು ಎಂದು ಹೇಳಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ ಗಡ್ಕರಿ, ಸಮಾನ ನಾಗರಿಕತೆ, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವಿಷಯದಲ್ಲಿ ಬಿಜೆಪಿ ಯಾವುದೇ ರಾಜೀ ಸಂಧಾನ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದರು. ಒಟ್ಟಾರೆ ಬಿಜೆಪಿ ಹೊಸ, ಹೊಸ ತಂತ್ರಗಳ ಮೂಲಕ ವೋಟ್ ಬ್ಯಾಂಕ್ ರಾಜಕಾರಣದ ನೂತನ ತಂತ್ರ ಹೆಣೆಯುತ್ತಿದೆ ಎಂಬುದರ ಮುನ್ಸೂಚನೆ ಇದಾಗಿದೆ ಎಂಬುದು ರಾಜಕೀಯ ಪರಿಣತರ ಅಭಿಮತ.