ಕಳೆದ ಮೂರು ವರ್ಷಗಳಿಂದ ತನ್ನ ಸಹೋದ್ಯೋಗಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ನಂತರ ಆಕೆಯ ಆಕ್ಷೇಪಾರ್ಹ ಭಾವಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ರೈಲ್ವೇ ನೌಕರನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ರೈಲ್ವೇ ಇಲಾಖೆಯ ಮುಂಬೈನ ಕಾನ್‌ಫಿಡೆನ್ಶಿಯಲ್ ವಿಭಾಗದಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅನಿಲ್ ಮೊಡಗಿಲ್ (45) ಎಂಬಾತನೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ. 2007ರಿಂದಲೇ ಮನೆಯಲ್ಲಿ ಯಾರು ಇಲ್ಲದ ಹೊತ್ತಿಗೆ 46ರ ಹರೆಯದ ಮಹಿಳೆಯನ್ನು ಆರೋಪಿ ಲೈಂಗಿಕವಾಗಿ ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೇ ಕ್ವಾಟರ್ಸ್‌ನಲ್ಲಿರುವ ಈತ ವಿವಾಹಿತನಾಗಿದ್ದು, ಮಹಿಳೆಗೆ ಮೊದಲ ಬಾರಿ ಲೈಂಗಿಕ ಕಿರುಕುಳ ನೀಡುವ ಸಂದರ್ಭದಲ್ಲಿ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದಿದ್ದ. ಬಲಿಪಶು ಮಹಿಳೆಗೆ ಒಬ್ಬ ಪುತ್ರನಿದ್ದಾನೆ. ಆಕೆಯ ಪತಿ ಕೂಡಾ ರೈಲ್ವೇ ನೌಕರ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಮನೆಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಆರೋಪಿ ಫೋಟೋ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾ ಅತ್ಯಾಚಾರವೆಸಗುತ್ತಿದ್ದ. ಆಲ್ಲದೆ ತನ್ನನ್ನು ಧಿಕ್ಕರಿಸಿದರೆ ಆಶ್ಲೀಲ ಚಿತ್ರಗಳನ್ನು ಬಯಲುಪಡಿಸುವುದಾಗಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಂದನ್ನು ಖರೀದಿಸಲು ಆರೋಪಿಗೆ ಹಣದ ಅಗತ್ಯವಿತ್ತು. ಹಾಗಾಗಿ ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ ಬಲಿಪಶು ಮಹಿಳೆಯಿಂದ ಕಳೆದ ಮೂರು ವರ್ಷದ ಅವಧಿಯಲ್ಲಿ ಒಟ್ಟು 4.50 ಲಕ್ಷ ರೂಪಾಯಿ ಪಡೆದಿದ್ದ ಎಂದು ಸಂತಾಕ್ರೂಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಪಿ. ಚೌಧುರಿ ತಿಳಿಸಿದ್ದಾರೆ.
ಆರೋಪಿಯ ಮೇಲೆ ಅತ್ಯಾಚಾರಕ್ಕಾಗಿ ಐಪಿಸಿ ಸೆಕ್ಷನ್ 376, ಸುಲಿಗೆ 384 ಮತ್ತು ಬೆದರಿಕೆ 385ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.