ಭಾರತದ ವಿರುದ್ಧ ಸದಾ ಅಪಪ್ರಚಾರ ಮತ್ತು ಭಾರತ ವಿರೋಧಿ ನಿಲುವು ಹಾಗೂ ಕೆಲವು ಬಾರಿ ಧಾರ್ಮಿಕ ಭಾವನೆಗಳಿಗೆ ಕಿಚ್ಚು ಹತ್ತಿಸುವ ಕಾರ್ಯಕ್ರಮ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವ ಪಾಕಿಸ್ತಾನದ 11 ಟಿವಿ ಚಾನೆಲ್‌ಗಳ ಮೇಲೆ ಜಮ್ಮು ಜಿಲ್ಲಾಡಳಿತವು ನಿಷೇಧ ಹೇರಿದೆ.
ಈ ಚಾನೆಲ್‌ಗಳನ್ನು ಪ್ರಸಾರ ಮಾಡಬಾರದು ಎಂದು ಎಲ್ಲಾ ಕೇಬಲ್ ಆಪರೇಟರುಗಳಿಗೆ ಆದೇಶ ನೀಡಲಾಗಿದೆ. ಹಾಗಾಗಿ ಇನ್ನು ಅನುಮತಿಯಿಲ್ಲದೆ ಈ ಚಾನೆಲ್‌ಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಸರಕಾರಿ ಮೂಲಗಳು ಹೇಳಿವೆ.
ಕೇಬಲ್ ಟಿವಿ ನಿಯಂತ್ರಣ ಮತ್ತು ಮಾರ್ಗದರ್ಶಿ ಕಾಯ್ದೆಯ ಪ್ರಕಾರ ಒಂದು ವಿದೇಶಿ ಟಿವಿ ಚಾನೆಲ್ ಕಾನೂನು ವಿರೋಧಿಯೆಂದು ಪರಿಗಣನೆಯಾಗಿದ್ದರೆ, ಅದನ್ನು ಪ್ರಸಾರ ಮಾಡಲು ಕೇಬಲ್ ಆಪರೇಟರುಗಳಿಗೆ ಅವಕಾಶ ಇಲ್ಲ.
ಈ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನಿ ಚಾನೆಲ್‌ಗಳನ್ನು ಕೆಲವು ಕೇಬಲ್ ಆಪರೇಟರುಗಳು ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದ ನಂತರ ಜಮ್ಮು ಉಪ ಆಯುಕ್ತ ಎಂ.ಕೆ. ದ್ವಿವೇದಿ ನೂತನ ಆದೇಶವನ್ನು ಹೊರಡಿಸಿದ್ದಾರೆ.
ತಮಗೆ ವಿದೇಶಿ ಚಾನೆಲ್‌ಗಳನ್ನು ಪ್ರಸಾರ ಮಾಡಲು ಅನುಮತಿ ಇದೆಯೇ, ಇಲ್ಲವೇ ಎಂಬುದನ್ನು ಎರಡು ದಿನದೊಳಗೆ ಕೇಬಲ್ ಆಪರೇಟರುಗಳು ತಿಳಿಸಬೇಕು. ಈ ಚಾನೆಲ್‌ಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ನೋಂದಣಿಯಾಗಿರದೇ ಇರುವುದರಿಂದ ಅವುಗಳು ಕಾನೂನು ಬಾಹಿರವಾಗಿವೆ. ಈ ಸಂಬಂಧ ಜಿಲ್ಲೆಯ ಎಲ್ಲಾ ಕೇಬಲ್ ಆಪರೇಟರುಗಳಿಗೂ ನೊಟೀಸ್ ನೀಡಲಾಗಿದೆ ಎಂದು ದ್ವಿವೇದಿ ತಿಳಿಸಿದ್ದಾರೆ.
ಕ್ಯೂಟಿವಿ, ಆರಿ, ಪಿಟಿವಿ, ಜಿಯೋ, ಡಾನ್, ಎಕ್ಸ್‌ಪ್ರೆಸ್ ಟಿವಿ, ವಕ್ತ್, ನೂರ್, ಹಾದಿ, ಅಜ್ ಟಿವಿ ಮತ್ತು ಪೀಸ್ ಟಿವಿಗಳ ಮೇಲೆ ಸರಕಾರದ ನಿಷೇಧವಿದೆ. ಈ ಚಾನೆಲ್‌ಗಳನ್ನು ಇದುವರೆಗೆ ಪ್ರಸಾರ ಮಾಡುತ್ತಿದ್ದ ಕೇಬಲ್ ಆಪರೇಟರುಗಳು ತಕ್ಷಣವೇ ಸ್ಥಗಿತಗೊಳಿಸಿದ್ದಾರೆ.
ಭಾರತ ವಿರೋಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು, ತೀರಾ ಮೂಲಭೂತವಾದಿ ಧಾರ್ಮಿಕ ಮೂಢನಂಬಿಕೆಗಳನ್ನು ಬಿತ್ತಲು ಯತ್ನಿಸುವುದು ಮುಂತಾದ ಕಾರಣಗಳ ಹಿನ್ನೆಲೆಯಲ್ಲಿ ಚಾನೆಲ್‌ಗಳ ಮೇಲೆ ನಿಷೇಧಿಸಲಾಗಿದೆ.
ಆದರೆ ಇದನ್ನು ಮುಸ್ಲಿಂ ಸಂಘಟನೆಗಳು ತೀವ್ರವಾಗಿ ಆಕ್ಷೇಪಿಸಿವೆ. ಇದು ಅಲ್ಪಸಂಖ್ಯಾತ ಸಮುದಾಯದ ವ್ಯವಹಾರಗಳ ನಡುವೆ ಮೂಗು ತೂರಿಸಿದಂತಾಗಿದೆ ಎಂದು ಜಮ್ಮು ಶಿಯಾ ಫೆಡರೇಷನ್ ಅಧ್ಯಕ್ಷ ಆಶಿಖ್ ಖಾನ್ ಆರೋಪಿಸಿದ್ದಾರೆ.
ಸರಕಾರ ತನ್ನ ನಿಷೇಧವನ್ನು ಹಿಂದಕ್ಕೆ ಪಡೆದುಕೊಳ್ಳದಿದ್ದರೆ ಭಾರೀ ಪ್ರತಿಭಟನೆ ನಡೆಸುವ ಬೆದರಿಕೆಯನ್ನೂ ಸ್ಥಳೀಯ ಕೆಲವು ಮುಸ್ಲಿಂ ಸಂಘಟನೆಗಳು ಹಾಕಿವೆ.