ಬೆಲೆ ಏರಿಕೆ ವಿರೋಧಿಸಿ 13 ಪಕ್ಷಗಳು 12 ಗಂಟೆಗಳ ಕಾಲ ಮಂಗಳವಾರ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಆಡಳಿತಾರೂಢ ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ, ಎಡಪಕ್ಷಗಳು ಸೇರಿದಂತೆ 13 ಪಕ್ಷಗಳು ಇಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇರಳ, ಕೋಲ್ಕತಾದಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. ಅಲ್ಲದೇ ರೈಲು, ಬಸ್ ಹಾಗೂ ವಿಮಾನ ಸಂಚಾರ ವ್ಯತ್ಯಯಗೊಂಡಿದೆ.
ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಬಂದ್ ಹಿಂಚಾರಕ್ಕೆ ತಿರುಗಿದ್ದು ಸಮಾಜವಾದಿ ಪಕ್ಷದ ಕಾರ್ಯಕರ್ತರು ಎರಡು ಬಸ್‌ಗಳಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದೆ. ಗಾಜಿಯಾಬಾದ್‌ನಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ತಡೆದು ನಿಲ್ಲಿಸಲಾಗಿದೆ.
ಬೆಲೆ ಏರಿಕೆ ವಿರುದ್ಧ ವಿಪಕ್ಷಗಳಿಂದ ಖಂಡನಾ ನಿರ್ಣಯ (ಕಟ್ ಮೋಷನ್): ಒಂದೆಡೆ ಪ್ರತಿಭಟನೆ, ಬಂದ್ ಅದರ ಬೆನ್ನಲ್ಲೇ ಬೆಲೆ ಏರಿಕೆ ಕುರಿತಂತೆ ಯುಪಿಎ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ವಿಪಕ್ಷಗಳು ಸಜ್ಜಾಗಿವೆ. ಆ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದು, ಬಿಎಸ್ಪಿ, ಸಮಾಜವಾದಿ ಪಕ್ಷಗಳು ವಿಪ್ ಜಾರಿ ಕುರಿತು ಮಾತುಕತೆ ನಡೆಸುತ್ತಿವೆ.
ಇಂದು ಸಂಸತ್‌ನಲ್ಲಿ ಯುಪಿಎ ಸರ್ಕಾರ ವಿತ್ತ ಮಸೂದೆ ಮಂಡಿಸಲಿದ್ದು, ಇದಕ್ಕೆ ವಿರುದ್ಧವಾಗಿ ವಿಪಕ್ಷಗಳು ಖಂಡನಾ ನಿರ್ಣಯ(ಕಟ್ ಮೋಷನ್) ಮಂಡಿಸಲು ಸಜ್ಜಾಗಿವೆ.
ಮನಮೋಹನ್ ಸಿಂಗ್ ಸರ್ಕಾರಕ್ಕೆ ಅಗ್ನಿ ಪರೀಕ್ಷೆ: ಪೆಟ್ರೋಲ್,ಡೀಸೆಲ್ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ವಿಪಕ್ಷಗಳು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಂಸತ್‌ನಲ್ಲಿ ಇಂದು ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ.
ಹಾಗಾಗಿ ವಿಪಕ್ಷಗಳು ನಿರ್ಧಾರದಿಂದಾಗಿ ಯುಪಿಎ ಸರ್ಕಾರ ಸಂಸತ್‌ನಲ್ಲಿ ತನ್ನ ಸಂಖ್ಯಾಬಲವನ್ನು ಸಾಬೀತುಪಡಿಸಬೇಕಾಗಿದೆ. ಒಂದು ವೇಳೆ ಮ್ಯಾಜಿಕ್ ನಂಬರ್ ಗೇಮ್‌ನಲ್ಲಿ ಯುಪಿಎ ಹಿನ್ನಡೆ ಅನುಭವಿಸಿದರೆ, ಆಡಳಿತಾರೂಢ ಕೇಂದ್ರ ಸರ್ಕಾರ ಗಂಡಾಂತರ ಸ್ಥಿತಿಗೆ ಬರಲಿದೆ.
ನಂಬರ್ ಗೇಮ್-ಯುಪಿಎಗೆ ಕಂಟಕ?: 543 ಸದಸ್ಯ ಬಲವುಳ್ಳ ಸಂಸತ್‌ನಲ್ಲಿ, ಸರ್ಕಾರದ ಬಹುಮತ ಸಾಬೀತಿಗೆ 272 ಸಂಸದರ ಬೆಂಬಲ ಅಗತ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್‌ನ 207 ಸಂಸದರು ಸೇರಿದಂತೆ 257 ಸದಸ್ಯರ ಬೆಂಬಲ ಇದೆ. ಇದರಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ನ 19 ಸಂಸದರು, ಡಿಎಂಕೆಯ 18, ಎನ್‌ಸಿಪಿ-9, ನ್ಯಾಷನಲ್ ಕಾನ್ಫರೆನ್ಸ್‌ನ-3, ಎಂಐಎಂನ-01. ಅಲ್ಲದೇ ಮಸ್ಲಿಮ್ ಲೀಗ್‌ನ ಇಬ್ಬರು ಸಂಸದರ ಬಾಹ್ಯ ಬೆಂಬಲ ಹಾಗೂ ಆರು ಪಕ್ಷೇತರ ಸಂಸದರು ಸೇರಿ ಒಟ್ಟು 265 ಸಂಸದರ ಬೆಂಬಲ ಯುಪಿಎಗೆ ಇದೆ.ಆದರೂ ಏಳು ಮಂದಿ ಸಂಸದರ ಕೊರತೆ ಎದುರಾಗಲಿದೆ.ಇದಕ್ಕೆ ಮಾಯಾವತಿ ಪಕ್ಷದ ಸಂಸದರ (21) ಬೆಂಬಲ ಅಗತ್ಯ. ಆದರೆ ಅಕ್ರಮ ಆಸ್ತಿ ಹೊಂದಿರುವ ಪ್ರಕರಣದ ಕುರಿತಂತೆ ಯುಪಿಎ ವಿರುದ್ಧ ಜಂಗೀಕುಸ್ತಿಗೆ ಇಳಿದಿರುವ ಮಾಯಾ ಒಂದು ವೇಳೆ ಸೇಡು ತೀರಿಸಿಕೊಂಡರೆ ಯುಪಿಎಗೆ ಕಂಟಕ ತಪ್ಪಿದ್ದಲ್ಲ. ಕಾಂಗ್ರೆಸ್ ಮಾಯಾ ಜೊತೆ ಡೀಲ್‌ಗಿಳಿದು ಯಶ ಕಂಡರೆ ಮಾತ್ರ ಯುಪಿಎ 286 ಮ್ಯಾಜಿಕ್ ನಂಬರ್ ಪಡೆದು ಸರ್ಕಾರ ಉಳಿಸಿಕೊಳ್ಳಬಹುದಾಗಿದೆ.
ಖಂಡನಾ ನಿರ್ಣಯ ಮಂಡಿಸಲು ಮುಂದಾಗಿರುವ ವಿರೋಧ ಪಕ್ಷಗಳ ಸಂಸದರ ಬಲ 242, ಅದರಲ್ಲಿ ಬಿಜೆಪಿಯ 116, ಜೆಡಿಯುನ 20, ಜೆಎಂಎಂನ 2, ಶಿವಸೇನೆಯ 11, ಅಖಾಲಿ ದಳ-04, ಎಐಎಡಿಎಂಕೆ, ಬಿಜೆಡಿ, ಎಸ್ಪಿ, ಆರ್‌ಜೆಡಿ, ಟಿಡಿಪಿ, ಆರ್‌ಎಲ್‌ಡಿ, ಎಲ್‌ಜೆಪಿ, ಜೆಡಿಎಸ್, ಐಎನ್ಎಲ್‌ಡಿ, ಸಿಪಿಐಎಂ, ಸಿಪಿಐ, ಫಾರ್ವರ್ಡ್ ಬ್ಲಾಕ್, ಆರ್‌ಎಸ್‌ಪಿ, 13 ಎನ್‌ಡಿಎಯೇತರ ಸೇರಿ 89 ಸಂಸದರು ಬೆಲೆ ಏರಿಕೆ ವಿರುದ್ಧವಾಗಿದ್ದಾರೆ.