ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳಲ್ಲೇ ಮಾತಾಡಿ, ಆದ್ರೆ ಕಲಾಪಕ್ಕೆ ಬನ್ನಿ: ಅಳಗಿರಿಗೆ ಸ್ಪೀಕರ್ (Parliament | Meira Kumar | M K Alagiri | DMK)
Bookmark and Share Feedback Print
 
ನಿಮಗೆ ಇಂಗ್ಲೀಷ್ ಅಥವಾ ಹಿಂದಿ ಬರದಿದ್ದರೂ ಚಿಂತೆ ಮಾಡಬೇಡಿ, ನಾವು ನಿಮಗೆ ದುಭಾಷಿಯನ್ನು ಒದಗಿಸುತ್ತೇವೆ, ಆದರೆ ಸಂಸತ್ ಕಲಾಪಕ್ಕೆ ಮಾತ್ರ ಗೈರು ಹಾಜರಾಗಬೇಡಿ -- ಇದು ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್ ಅವರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿಯವರಿಗೆ ಹೇಳಿರುವ ಮಾತು.

ಕಳೆದ ಹಲವು ಸಮಯಗಳಿಂದ ನಡೆಯುತ್ತಿರುವ ಬಜೆಟ್ ಅಧಿವೇಶನದಿಂದ ದೂರವೇ ಉಳಿದಿರುವ ಡಿಎಂಕೆ ಸಚಿವರು ಎಲ್ಲಿ ಎಂದು ವಿರೋಧ ಪಕ್ಷಗಳು ಈಗಾಗಲೇ ಹಲವು ಬಾರಿ ಲೋಕಸಭೆ ಮತ್ತು ರಾಜ್ಯಸಭಾ ಸ್ಪೀಕರುಗಳಲ್ಲಿ ಪ್ರಶ್ನಿಸಿವೆ. ಹೀಗಾಗಿ ಕೊನೆಗೂ ಸಂಬಂಧಪಟ್ಟವರಲ್ಲಿ ವಿಚಾರಿಸಿರುವ ಲೋಕಸಭಾ ಸ್ಪೀಕರ್ ಕುಮಾರ್, ಅಳಗಿರಿಯನ್ನು ಕಲಾಪಕ್ಕೆ ಬರುವಂತೆ ಸೂಚಿಸಿದ್ದಾರೆ.

ಸಂಸತ್ ಕಲಾಪಕ್ಕೆ ಹಾಜರಾಗುವಂತೆ ಅಳಗಿರಿಯವರಿಗೆ ನಾನು ಸೂಚನೆ ನೀಡಿದ್ದೇವೆ. ಅವರ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ಕೂಡ ನಾನು ನೀಡಿದ್ದೇನೆ ಎಂದು ಕುಮಾರ್ ಪತ್ರಕರ್ತರಿಗೆ ಹೇಳಿದ್ದಾರೆ.

ಈ ಹಿಂದೆ ಇಂಗ್ಲೀಷ್ ಮಾತನಾಡಲು ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಅಧಿಕೃತ ವಿದೇಶ ಪ್ರವಾಸಗಳಿಗೂ ಅಳಗಿರಿ ನಿರಾಕರಿಸುತ್ತಿದ್ದರು. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಿಡಿತ ಹೊಂದಿಲ್ಲದ ಅಳಗಿರಿ ಇದೇ ಕಾರಣದಿಂದಾಗಿ ಮುಜುಗರಕ್ಕೊಳಗಾಗುತ್ತಿದ್ದು, ಸಂಸತ್ತಿನಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ತಮಿಳಿನಲ್ಲಿ ನಿರರ್ಗಳವಾಗಿ ಮಾತನಾಡುವ ಅಳಗಿರಿಯವರಿಗೆ ಅಗತ್ಯ ಬಿದ್ದರೆ ದುಭಾಷಿಯನ್ನು ಒದಗಿಸಲು ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಅವರು ಕಲಾಪದಿಂದ ದೂರ ಉಳಿಯುವುದು ಸರಿಯಲ್ಲ ಎಂದು ಸ್ಪೀಕರ್ ಕುಮಾರ್ ಹೇಳಿದ್ದಾರೆಂದು ವರದಿಗಳು ಹೇಳಿವೆ.

ಕಳೆದ ಒಂದು ವರ್ಷದಿಂದ ನಾವು ಅಳಗಿರಿಯವರನ್ನು ನೋಡೇ ಇಲ್ಲ. ಅವರು ಸಂಸತ್ತಿನಿಂದ ಸದಾ ದೂರವೇ ಉಳಿಯುತ್ತಾರೆ. ನಮ್ಮ ಮಾಹಿತಿಗಳ ಪ್ರಕಾರ ಅವರು ಸಂಪುಟ ಸಭೆಗಳಿಗೂ ಹಾಜರಾಗುತ್ತಿಲ್ಲ. ನಮಗೀಗ ಅಳಗಿರಿ ಎಲ್ಲಿದ್ದಾರೆ ಎಂಬುದು ಬಹಿರಂಗವಾಗಬೇಕಿದೆ ಎಂದು ಬಿಜೆಪಿ ನಾಯಕಿ ಹಾಗೂ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಶುಕ್ರವಾರವಷ್ಟೇ ಲೋಕಸಭೆಯಲ್ಲಿ ಆಗ್ರಹಿಸಿದ್ದರು.

ಅಳಗಿರಿ ಪ್ರವಾಸದಲ್ಲಿ ಕಮ್ಮಿಯಿಲ್ಲ..
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪ್ರಥಮ ಪುತ್ರ ಅಳಗಿರಿಗೆ ತಮಿಳು ಬಿಟ್ಟು ಇನ್ಯಾವುದೇ ಭಾಷೆಗಳು ಬರದಿದ್ದರೂ, ಸಚಿವ ಸ್ಥಾನಕ್ಕೆ ಸರದಿಯಲ್ಲಿ ನಿಂತು ಪಡೆದುಕೊಂಡಿದ್ದರು. ಇದೀಗ ಅವರ ಪ್ರವಾಸ ಮಾಡಿದ ಪಟ್ಟಿಗಳೂ ಹೊರ ಬಿದ್ದಿವೆ.

ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಪಡೆದುಕೊಂಡ ವರದಿ ಪ್ರಕಾರ 2009ರ ಮೇಯಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅಳಗಿರಿಯವರು ತನ್ನ ತಂದೆಯಿರುವ ಚೆನ್ನೈ ಮತ್ತು ತನ್ನ ಲೋಕಸಭಾ ಕ್ಷೇತ್ರ ಮಧುರೈಗೆ 61 ಬಾರಿ ದೇಶೀಯ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

ಮೇ 29ರಿಂದ ಡಿಸೆಂಬರ್ ಒಂದರ ನಡುವೆ ಅವರು ಆರು ಅಂತಾರಾಷ್ಟ್ರೀಯ ವಿಮಾನಗಳಲ್ಲೂ ಪ್ರಯಾಣಿಸಿದ್ದಾರೆ. ಅವರ ಒಟ್ಟಾರೆ ವೈಮಾನಿಕ ವೆಚ್ಚ 14.5 ಲಕ್ಷ ರೂಪಾಯಿಗಳು ಎಂದು ಆರ್‌ಟಿಐ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ