ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದಲ್ಲೇ ಅತೀ ಹೆಚ್ಚು ಮಹಿಳಾ ಭಿಕ್ಷುಕರಿರುವುದು ಮುಂಬೈಯಲ್ಲಿ
(Mumbai | women beggars | Krishna Tirath | Rajya Sabha)
ದೇಶದಲ್ಲೇ ಅತೀ ಹೆಚ್ಚು ಮಹಿಳಾ ಭಿಕ್ಷುಕರಿರುವುದು ಮುಂಬೈಯಲ್ಲಿ
ನವದೆಹಲಿ, ಮಂಗಳವಾರ, 27 ಏಪ್ರಿಲ್ 2010( 10:54 IST )
ದೇಶದಲ್ಲೇ ಅತೀ ಹೆಚ್ಚು ಭಿಕ್ಷುಕಿಯರಿರುವುದು ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ. ನಂತರದ ಸ್ಥಾನ ರಾಜಧಾನಿ ದೆಹಲಿಗೆ ಸಲ್ಲುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವೆ ಕೃಷ್ಣ ತಿರಾತ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಮುಂಬೈಯಲ್ಲಿ 1818, ದೆಹಲಿಯಲ್ಲಿ 319 ಹಾಗೂ ಕೊಲ್ಕತ್ತಾದಲ್ಲಿ 19 ಮಹಿಳಾ ಭಿಕ್ಷುಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉಳಿದ ಪ್ರಮುಖ ನಗರಗಳ ವಿವರಗಳನ್ನು ಅವರು ನೀಡಿಲ್ಲ.
ಅದೇ ಹೊತ್ತಿಗೆ ದೇಶದ ಆರು ಪ್ರಮುಖ ನಗರಗಳಲ್ಲಿನ ಬಾಲಕಿಯರು ಮತ್ತು ಮಹಿಳೆಯರ ವೇಶ್ಯಾವಾಟಿಕೆಯ ಕುರಿತೂ ಮಾಹಿತಿ ನೀಡಿದ್ದಾರೆ. 2002-04ರ ಅವಧಿಯಲ್ಲಿ ನಡೆಸಿದ ಅಂದಾಜಿನ ಪ್ರಕಾರ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಲ್ಕತ್ತಾ ಮತ್ತು ಮುಂಬೈಗಳಲ್ಲಿ ಒಟ್ಟು 1.5 ಲಕ್ಷದಿಂದ 2 ಲಕ್ಷ ವೇಶ್ಯೆಯರಿದ್ದಾರೆ.
ಮಹಿಳೆಯರು ನಿರಾಶ್ರಿತೆಯರಾಗುವುದನ್ನು ತಡೆಗಟ್ಟಲು ಆರ್ಥಿಕ ಪ್ರಬಲೀಕರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಸರಕಾರ ಈಗಾಗಲೇ ಕೈಗೊಂಡಿದೆ ಎಂದು ಸಚಿವೆ ತಿರಾತ್ ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರಿಸಿದ್ದಾರೆ.
ಉಜ್ವಲಾ ಎಂದು ಹೆಸರಿಸಲಾಗಿರುವ ಯೋಜನೆಯೊಂದು ಜಾರಿಯಾಗುತ್ತಿದ್ದು, ಇದು ಬಾಲಕಿಯರು ಮತ್ತು ಮಹಿಳೆಯರ ಅಕ್ರಮ ಸಾಗಾಟ ಮತ್ತು ಅಕ್ರಮ ವೇಶ್ಯಾವಾಟಿಕೆಯನ್ನು ತಡೆಗಟ್ಟಿ, ಬಲಿಪಶುಗಳಿಗೆ ಪುನಶ್ಚೇತನ ಕಲ್ಪಿಸಲು ಸಹಾಯ ಮಾಡುತ್ತದೆ.