ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ಬೆಂಬಲಕ್ಕೆ ಬಂದ ಮಾಯಾವತಿ; ಸರಕಾರ ಅಭೇದ್ಯ (UPA govt | Mayawati | Finance Bill | Cut motion)
Bookmark and Share Feedback Print
 
ಇಂದು ನಡೆಯಲಿರುವ ಹಣಕಾಸು ಮಸೂದೆಯ ಮೇಲಿನ ಖಂಡನಾ ನಿರ್ಣಯ ಪರ ಮತ ಚಲಾಯಿಸಲು ಬಹುಜನ ಸಮಾಜ ಪಕ್ಷ ನಿರ್ಣಯಿಸಿದೆ. ಕೇಂದ್ರವನ್ನು ಕೋಮುವಾದಿ ಶಕ್ತಿಗಳು ಆಕ್ರಮಿಸಬಾರದು ಎಂಬ ಕಾರಣಕ್ಕೆ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಬಿಎಸ್‌ಪಿ ಅಧಿನಾಯಕಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ತನ್ನ ನಡೆಗೆ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಹಲವಾರು ಸಮಯದಿಂದ ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಟೀಕೆ ಮಾಡಿಕೊಂಡು ಬಂದಿದ್ದ ಮಾಯಾವತಿ, ಕಾಂಗ್ರೆಸ್ ಶ್ರೀಮಂತರ ಪರ ಕಾರ್ಯನಿರ್ವಹಿಸುತ್ತಿದೆ, ದಲಿತ ವಿರೋಧಿ ಎಂದೆಲ್ಲಾ ಭಾರೀ ಟೀಕೆ ವ್ಯಕ್ತಪಡಿಸಿದ್ದರು.

ಇದರೊಂದಿಗೆ ಹಣಕಾಸು ಮಸೂದೆ ಮೇಲಿನ ಖಂಡನಾ ನಿರ್ಣಯದಲ್ಲಿ ಭೀತಿ ಎದುರಿಸುತ್ತಿದ್ದ ಕಾಂಗ್ರೆಸ್ ನಿರಾಳವಾಗಿದೆ. 274 ಸದಸ್ಯ ಬಲವನ್ನು ಹೊಂದಿರುವ ಯುಪಿಎ, ಇದೀಗ ಬಿಎಸ್‌ಪಿಯಿಂದ 21 ಸದಸ್ಯರ ಬೆಂಬಲವನ್ನು ಪಡೆದುಕೊಳ್ಳಲಿದೆ. ಆಡಳಿತ ಪಕ್ಷವು ಲೋಕಸಭೆಯಲ್ಲಿ 272 ಸ್ಥಾನಗಳ ಬಹುಮತವನ್ನು ತೋರಿಸಿದರೆ ಸಾಕಾಗುತ್ತದೆ.

ಹಾಗಾಗಿ ಸರಕಾರದ ವಿರುದ್ಧ ಖಂಡನಾ ನಿರ್ಣಯ ಮತ ಚಲಾಯಿಸಲು ಸಿದ್ಧತೆ ನಡೆಸಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ, ಎಡಪಕ್ಷಗಳು ಮತ್ತು ಆರ್‌ಜೆಡಿ, ಸಮಾಜವಾದಿ ಪಕ್ಷಗಳಿಗೆ ತೀವ್ರ ನಿರಾಸೆ ಎದುರಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯುಪಿಎ ಸಂಖ್ಯಾಬಲ:
ಕಾಂಗ್ರೆಸ್ 207, ತೃಣಮೂಲ ಕಾಂಗ್ರೆಸ್ 19, ಡಿಎಂಕೆ 18, ಎನ್‌ಸಿಪಿ 9, ನ್ಯಾಷನಲ್ ಕಾನ್ಫರೆನ್ಸ್ 3, ಮುಸ್ಲೀಂ ಲೀಗ್ 2, ಇತರ ಎಂಟು ಪಕ್ಷಗಳಿಂದ 8 ಸದಸ್ಯರು, 2 ನಾಮಕರಣ ಸದಸ್ಯರು. ಇತರ ಕೆಲವು ಪಕ್ಷೇತರ ಸದಸ್ಯರು ಕೂಡ ಯುಪಿಎಯನ್ನು ಬೆಂಬಲಿಸುತ್ತಿದ್ದಾರೆ.

ಇದರೊಂದಿಗೆ ಒಟ್ಟಾರೆ ಯುಪಿಎ 274 ಸ್ಥಾನಗಳನ್ನು ಪಡೆದಂತಾಗುತ್ತದೆ. ಮಾಯಾವತಿಯವರ 21 ಸ್ಥಾನಗಳೂ ಸೇರಿದರೆ 295. ಹಾಗಾಗಿ ಖಂಡನಾ ನಿರ್ಣಯದಲ್ಲಿ ಸರಕಾರಕ್ಕೆ ಯಾವುದೇ ಭೀತಿಯಿಲ್ಲ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಆಡಳಿತ ಪಕ್ಷಕ್ಕೆ ಬೇಕಾಗಿರುವುದು 543ರಲ್ಲಿ ಕೇವಲ 272 ಸದಸ್ಯ ಬಲ ಮಾತ್ರ.

ಅಕ್ರಮ ಆಸ್ತಿ ಪ್ರಕರಣವೇ ಮಾಯಾ ನಿಲುವಿಗೆ ಕಾರಣ?
ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ಕುಣಿಕೆಯಲ್ಲಿರುವ ಮಾಯಾವತಿಯನ್ನು ಬಚಾವ್ ಮಾಡುವ ಸಂಕೇತವನ್ನು ಈಗಾಗಲೇ ಕೇಂದ್ರ ಸರಕಾರ ನೀಡಿದ್ದು, ಇದೇ ಕಾರಣದಿಂದ ಮಾಯಾವತಿ ಯುಪಿಎ ಸರಕಾರವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಇದನ್ನು ಮಾಯಾವತಿ ಒಪ್ಪಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪತನವಾದರೆ, ಅಲ್ಲಿ ಕೋಮುವಾದಿ ಶಕ್ತಿಗಳು ಪ್ರಬಲವಾಗಬಹುದು. ಇದನ್ನು ತಪ್ಪಿಸಲು ಸರಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯು ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಅವರ ನೀತಿಗಳಲ್ಲೇ ಸಾಕಷ್ಟು ಹುಳುಕುಗಳಿವೆ. ಹಾಗಾಗಿ ನಾವು ಹಣಕಾಸು ಮಸೂದೆ ಖಂಡನಾ ನಿರ್ಣಯದಲ್ಲಿ ಬಿಜೆಪಿಯನ್ನು ಬೆಂಬಲಿಸದೇ ಇರಲು ನಿರ್ಧರಿಸಿದ್ದೇವೆ ಎಂದು ಬಿಎಸ್‌ಪಿ ಸಂಸದ ವಿಜಯ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಾಯಾವತಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಇದರ ವಿರುದ್ಧ ಇತ್ತೀಚೆಗಷ್ಟೇ ಮಾಯಾವತಿ ಕಿಡಿ ಕಾರಿದ್ದರು. ಕಾಂಗ್ರೆಸ್ ಚಿತಾವಣೆಯಿಂದಾಗಿ ಸಿಬಿಐ ತನ್ನ ವಿರುದ್ಧ ಹಗೆ ಸಾಧಿಸುತ್ತಿದೆ. ಇತರ ನಾಯಕರಾದ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರನ್ನು ನಡೆಸಿಕೊಂಡಂತೆ ನನ್ನನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ಕಿಡಿ ಕಾರಿದ್ದರು.

ಆದರೆ ಕೆಲವೇ ದಿನಗಳ ನಂತರ, ತಾನು ಮಾಯಾವತಿ ಪ್ರಕರಣವನ್ನು ಕೊನೆಗೊಳಿಸುವ ವಿಚಾರವನ್ನು ಪರಿಗಣಿಸುತ್ತೇನೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದೇ ಕಾರಣದಿಂದ ಮಾಯಾವತಿ ತನ್ನ ಬೆಂಬಲವನ್ನು ಸರಕಾರಕ್ಕೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ವಿರುದ್ಧ ಹಕ್ಕುಚ್ಯುತಿ...
ಜಂಟಿ ಸಂಸದೀಯ ಸಮಿತಿ ಕುರಿತು ಸಂಸತ್‌ನಿಂದ ಹೊರಗಡೆ ಹೇಳಿಕೆ ನೀಡಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ವಿರುದ್ಧ ಬಿಜೆಪಿ ಲೋಕಸಭೆಯಲ್ಲಿ ಹಕ್ಕು ಚ್ಯುತಿ ನಿರ್ಣಯ ಮಂಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ