ಇತ್ತೀಚೆಗಷ್ಟೇ ಛತ್ತೀಸ್‌ಗಢದ ದಂತೇವಾಡದಲ್ಲಿ 76 ಭದ್ರತಾ ಸಿಬ್ಬಂದಿಗಳ ಹತ್ಯಾಕಾಂಡ ನಡೆಸಿದ ಮಾವೋವಾದಿಗಳು, ಇದೀಗ ದುರ್ಘಟನೆಯ ವೀಡಿಯೋ ಚಿತ್ರಣವನ್ನು ತಮ್ಮ ಪಡೆಗಳಿಗೆ ತೋರಿಸಿ ಸ್ಫೂರ್ತಿ ನೀಡಲು ಯತ್ನಿಸುತ್ತಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಏಪ್ರಿಲ್ 6ರಂದು ನಡೆದಿದ್ದ ಈ ಭಯಾನಕ ಹತ್ಯಾಕಾಂಡವನ್ನು ಮಾವೋವಾದಿಗಳು ತಮ್ಮ ತರಬೇತಿ ಕೇಂದ್ರಗಳಲ್ಲಿ ಐತಿಹಾಸಿಕ ಮತ್ತು ಅಭೂತಪೂರ್ವ ಸಾಧನೆ ಎಂಬಂತೆ ಬಣ್ಣಿಸುತ್ತಾ ಹಿಂಬಾಲಕರಲ್ಲಿ ಸ್ಫೂರ್ತಿಯನ್ನು ಹುಟ್ಟಿಸಲು ಯತ್ನಿಸುತ್ತಿವೆ.
ಇಲ್ಲಿನ ಬಾಸ್ತಾರ್ ಪ್ರದೇಶದ ದಟ್ಟಾರಣ್ಯಗಳಲ್ಲಿರುವ ನಕ್ಸಲರು ಏಳು ನಿಮಿಷಗಳ ಅವಧಿಯ ಈ ವೀಡಿಯೋ ಚಿತ್ರಣವಿರುವ ಸಿಡಿಯನ್ನು ಪಸರಿಸುತ್ತಿದ್ದಾರೆ.
ದಂತೇವಾಡ ಜಿಲ್ಲೆಯ ಒಳಭಾಗದ ಆಂಧ್ರಪ್ರದೇಶ ಗಡಿಭಾಗಕ್ಕೆ ಸಮೀಪವಿರುವ ಮಾವೋವಾದಿ ಗೆರಿಲ್ಲಾ ಒಬ್ಬನಿಂದ ಈ ಸಿಡಿಗಳ ಕೆಲವು ಪ್ರತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಭಾರತದಲ್ಲಿ 1967ರಲ್ಲಿ ನಕ್ಸಲ್ ಚಳುವಳಿ ಹುಟ್ಟಿಕೊಂಡ ನಂತರ ನಡೆದ ಭಾರೀ ನರಮೇಧ ದಂತೇವಾಡದಲ್ಲಿ ನಡೆದಿತ್ತು. ಘಟನೆಯಲ್ಲಿ 75 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಸಾವನ್ನಪ್ಪಿದ್ದರು.
ಮಾವೋವಾದಿಗಳು ತೋರಿಸುತ್ತಿರುವ ವೀಡಿಯೋ ಉತ್ಕೃಷ್ಟ ಗುಣಮಟ್ಟವನ್ನು ಹೊಂದಿಲ್ಲ. ಭದ್ರತಾ ಸಿಬ್ಬಂದಿಗಳ ಶವಗಳ ಸಮೀಪದಿಂದ ಶಸ್ತ್ರಧಾರಿ ನಕ್ಸಲರು ನಡೆದುಕೊಂಡು ಹೋಗುತ್ತಿರುವ ಚಿತ್ರ ಇಲ್ಲಿ ಕಾಣಿಸುತ್ತಿದೆ.
ಸ್ಫೋಟಕಗಳನ್ನು ತುಂಬಿರುವ ಬ್ಯಾಗುಗಳನ್ನು ತಮ್ಮ ಬೆನ್ನಿನಲ್ಲಿ ಹಾಕಿಕೊಂಡು ಅರಣ್ಯ ಪ್ರದೇಶಗಳಲ್ಲಿ ಹೋರಾಟಗಾರರು ಸಾಗುತ್ತಿರುವ ದೃಶ್ಯಗಳೂ ಇದರಲ್ಲಿವೆ. ದಂತೇವಾಡ ಹತ್ಯಾಕಾಂಡ ನಡೆಸಲು ಹೋಗುವಾಗ ಮತ್ತು ವಾಪಸಾಗುವಾಗ ಈ ವೀಡಿಯೋವನ್ನು ಸಿದ್ಧಪಡಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಿಡಿಯ ಸಾಚಾತನವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಇದರಲ್ಲಿ ಇತ್ತೀಚಿನ ವರ್ಷಗಳಲ್ಲಿ ನಕ್ಸಲರು ನಡೆಸಿದ ಹತ್ಯಾಕಾಂಡಗಳ ದೃಶ್ಯಗಳನ್ನು ಸೇರಿಸಲಾಗಿದೆ. ಏಪ್ರಿಲ್ 6ರ ಒಂದೇ ದಿನದ ಘಟನೆ ಮಾತ್ರ ಇದರಲ್ಲಿಲ್ಲ ಎಂದು ಅವರು ಹೇಳಿದ್ದಾರೆ.