ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತಿಪಕ್ಷಗಳ ಖಂಡನಾ ನಿರ್ಣಯಗಳಿಗೆ ಸೋಲು; ಕೇಂದ್ರ ಸುಭದ್ರ (UPA | cut motion | Parliament | Finance Bill)
Bookmark and Share Feedback Print
 
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ನಿರೀಕ್ಷೆಯಂತೆ ಗಂಡಾಂತರದಿಂದ ಪಾರಾಗಿದ್ದು, ವಿರೋಧ ಪಕ್ಷಗಳ ಖಂಡನಾ ನಿರ್ಣಯಗಳು ಭಾರೀ ಅಂತರದಿಂದ ಸೋಲುಂಡ ನಂತರ ಹಣಕಾಸು ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಬಿಎಸ್‌ಪಿ ಪಕ್ಷದ ಬೆಂಬಲ ಪಡೆದುಕೊಂಡ ಯುಪಿಎ ಸರಕಾರ ಭಾರೀ ಬಹುಮತದೊಂದಿಗೆ ಸುಭದ್ರ ಸರಕಾರವಾಗಿ ಮುನ್ನಡೆದಿದೆ. ಇದಕ್ಕೆ ಪರೋಕ್ಷ ಸಾಥ್ ನೀಡಿದ್ದು ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್. ಈ ಎರಡೂ ಪಕ್ಷಗಳ ಸದಸ್ಯರು ಖಂಡನಾ ನಿರ್ಣಯದಲ್ಲಿ ಪಾಲ್ಗೊಂಡಿರಲಿಲ್ಲ.

ಇಂದು ಸಂಜೆ ಆರು ಗಂಟೆಗೆ ಖಂಡನಾ ನಿರ್ಣಯ ಆರಂಭವಾಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಲವು ಖಂಡನಾ ನಿರ್ಣಯಗಳನ್ನು ಮಂಡಿಸಿದರೂ, ಯುಪಿಎ ಸರಕಾರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಿಲ್ಲ. ನಂತರ ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಬಿಜೆಪಿ ನಾಯಕಿ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಪೆಟ್ರೋಲಿಯಂ ಸಚಿವಾಲಯದ ವಿರುದ್ಧ ಮಂಡಿಸಿದ ಮೊದಲ ಖಂಡನಾ ನಿರ್ಣಯದ ಪರ 162 ಹಾಗೂ ವಿರೋಧವಾಗಿ 246 ಮತಗಳು ಬಿದ್ದವು. ಈ ಖಂಡನಾ ನಿರ್ಣಯವನ್ನು ಯುಪಿಎ 84 ಮತಗಳ ಅಂತರದಿಂದ ಧ್ವನಿ ಮತದ ಮೂಲಕ ಗೆದ್ದುಕೊಂಡಿತು. ಆ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು.

ಉಳಿದಂತೆ ಎಡಪಕ್ಷಗಳು ಮಂಡಿಸಿದ ಖಂಡನಾ ನಿರ್ಣಯ ಮತ್ತು ಇತರ ಎಲ್ಲಾ ಖಂಡನಾ ನಿರ್ಣಯಗಳಲ್ಲೂ ಯುಪಿಎ ಸರಕಾರ ಭರ್ಜರಿ ಜಯ ಸಾಧಿಸಿದ ನಂತರ ಹಣಕಾಸು ಮಸೂದೆಯನ್ನು ಅಂಗೀಕರಿಸಲಾಯಿತು.

ಈ ಖಂಡನಾ ನಿರ್ಣಯಗಳಲ್ಲಿ ಸರಕಾರ ಸೋಲು ಅನುಭವಿಸುತ್ತಿದ್ದರೆ, ಅಧಿಕಾರ ತ್ಯಜಿಸಬೇಕಾಗಿತ್ತು.

ಇದಕ್ಕೂ ಮೊದಲು ಕಾಂಗ್ರೆಸ್ ಖಂಡನಾ ನಿರ್ಣಯ ಪರ ಮತ ಚಲಾಯಿಸಲು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು. ಇದೇ ರೀತಿ ಬಿಜೆಪಿ, ಎಡಪಕ್ಷಗಳು ಸೇರಿದಂತೆ ಇತರ ಹಲವು ಪಕ್ಷಗಳು ಕೂಡ ತಮ್ಮ ಸದಸ್ಯರು ಯಾವ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ಸೂಚಿಸಿ ವಿಪ್ ಜಾರಿ ಮಾಡಿತ್ತು.

ಆರ್‌ಜೆಡಿ, ಸಮಾಜವಾದಿ ಸಭಾತ್ಯಾಗ..
ಸರಕಾರದ ಆರ್ಥಿಕ ನೀತಿಗಳು, ಪೆಟ್ರೋಲಿಯಂ ಬೆಲೆಯೇರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ದೂರಿದ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಖಂಡನಾ ನಿರ್ಣಯದಲ್ಲಿ ಪಾಲ್ಗೊಳ್ಳದೇ ಇರುವ ಮೂಲಕ ಯುಪಿಎಗೆ ಪರೋಕ್ಷವಾಗಿ ಸಹಕರಿಸಿದರು.

ಇವರ ಪಕ್ಷಗಳ ಎಲ್ಲಾ ಸದಸ್ಯರು ಕೂಡ ನಾಯಕನ್ನೇ ಹಿಂಬಾಲಿಸಿದ್ದು, ಸಭಾತ್ಯಾಗ ಮಾಡಿದ್ದಾರೆ. ಬಿಜೆಪಿಯ ಜತೆ ತಾವು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಖಂಡನಾ ನಿರ್ಣಯ ಪರ ಮತ ಚಲಾಯಿಸಲು ನಾವು ಸಿದ್ಧರಿಲ್ಲ ಎಂದು ಈ ಎರಡು ಪಕ್ಷಗಳ ಮುಖಂಡರು ತಿಳಿಸಿದ್ದಾರೆ.

ಸರಕಾರವನ್ನು ಬೆಂಬಲಿಸಿದ ಮಾಯಾವತಿ...
ಹಣಕಾಸು ಮಸೂದೆಯ ಮೇಲಿನ ಖಂಡನಾ ನಿರ್ಣಯ ಪರ ಮತ ಚಲಾಯಿಸುವುದಾಗಿ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿಯವರು ಇಂದು ಬೆಳಿಗ್ಗೆ ಘೋಷಿಸಿದಂತೆ ಪಕ್ಷದ ಸದಸ್ಯರು ಸರಕಾರದ ಪರವಾಗಿ ತಮ್ಮ ನಿಲುವನ್ನು ಮಂಡಿಸಿದ್ದಾರೆ.

ಕೇಂದ್ರವನ್ನು ಕೋಮುವಾದಿ ಶಕ್ತಿಗಳು ಆಕ್ರಮಿಸಬಾರದು ಎಂಬ ಕಾರಣಕ್ಕೆ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಬಿಎಸ್‌ಪಿ ಅಧಿನಾಯಕಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ತನ್ನ ನಡೆಗೆ ಸ್ಪಷ್ಟನೆ ನೀಡಿದ್ದರು.

ಕಳೆದ ಹಲವಾರು ಸಮಯದಿಂದ ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಟೀಕೆ ಮಾಡಿಕೊಂಡು ಬಂದಿದ್ದ ಮಾಯಾವತಿ, ಕಾಂಗ್ರೆಸ್ ಶ್ರೀಮಂತರ ಪರ ಕಾರ್ಯನಿರ್ವಹಿಸುತ್ತಿದೆ, ದಲಿತ ವಿರೋಧಿ ಎಂದೆಲ್ಲಾ ಈ ಹಿಂದೆ ಭಾರೀ ಟೀಕೆ ವ್ಯಕ್ತಪಡಿಸಿದ್ದರು.

ಸಂಖ್ಯಾಬಲದ ಭೀತಿ ಎದುರಿಸುತ್ತಿದ್ದ ಕಾಂಗ್ರೆಸ್‌ಗೆ ಬಿಎಸ್‌ಪಿಯ 21 ಸದಸ್ಯ ಬಲವು ಅಮೂಲ್ಯವಾಗಿತ್ತು. ಈ ಕಾರಣದಿಂದಾಗಿ ಸರಕಾರದ ವಿರುದ್ಧ ಖಂಡನಾ ನಿರ್ಣಯ ಮತ ಚಲಾಯಿಸಲು ಸಿದ್ಧತೆ ನಡೆಸಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ, ಎಡಪಕ್ಷಗಳು ಮತ್ತು ಆರ್‌ಜೆಡಿ, ಸಮಾಜವಾದಿ ಪಕ್ಷಗಳಿಗೆ ತೀವ್ರ ನಿರಾಸೆಯುಂಟಾಯಿತು.

ಅಕ್ರಮ ಆಸ್ತಿ ಪ್ರಕರಣವೇ ಮಾಯಾ ನಿಲುವಿಗೆ ಕಾರಣ?
ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ಕುಣಿಕೆಯಲ್ಲಿರುವ ಮಾಯಾವತಿಯನ್ನು ಬಚಾವ್ ಮಾಡುವ ಸಂಕೇತವನ್ನು ಈಗಾಗಲೇ ಕೇಂದ್ರ ಸರಕಾರ ನೀಡಿದ್ದು, ಇದೇ ಕಾರಣದಿಂದ ಮಾಯಾವತಿ ಯುಪಿಎ ಸರಕಾರವನ್ನು ಬೆಂಬಲಿಸಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತಿದೆ.

ಆದರೆ ಇದನ್ನು ಮಾಯಾವತಿ ಒಪ್ಪಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪತನವಾದರೆ, ಅಲ್ಲಿ ಕೋಮುವಾದಿ ಶಕ್ತಿಗಳು ಪ್ರಬಲವಾಗಬಹುದು. ಇದನ್ನು ತಪ್ಪಿಸಲು ಸರಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯು ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಅವರ ನೀತಿಗಳಲ್ಲೇ ಸಾಕಷ್ಟು ಹುಳುಕುಗಳಿವೆ. ಹಾಗಾಗಿ ನಾವು ಹಣಕಾಸು ಮಸೂದೆ ಖಂಡನಾ ನಿರ್ಣಯದಲ್ಲಿ ಬಿಜೆಪಿಯನ್ನು ಬೆಂಬಲಿಸದೇ ಇರಲು ನಿರ್ಧರಿಸಿದ್ದೇವೆ ಎಂದು ಬಿಎಸ್‌ಪಿ ಸಂಸದ ವಿಜಯ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಾಯಾವತಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಇದರ ವಿರುದ್ಧ ಇತ್ತೀಚೆಗಷ್ಟೇ ಮಾಯಾವತಿ ಕಿಡಿ ಕಾರಿದ್ದರು. ಕಾಂಗ್ರೆಸ್ ಚಿತಾವಣೆಯಿಂದಾಗಿ ಸಿಬಿಐ ತನ್ನ ವಿರುದ್ಧ ಹಗೆ ಸಾಧಿಸುತ್ತಿದೆ. ಇತರ ನಾಯಕರಾದ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರನ್ನು ನಡೆಸಿಕೊಂಡಂತೆ ನನ್ನನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ಕಿಡಿ ಕಾರಿದ್ದರು.

ಆದರೆ ಕೆಲವೇ ದಿನಗಳ ನಂತರ, ತಾನು ಮಾಯಾವತಿ ಪ್ರಕರಣವನ್ನು ಕೊನೆಗೊಳಿಸುವ ವಿಚಾರವನ್ನು ಪರಿಗಣಿಸುತ್ತೇನೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದೇ ಕಾರಣದಿಂದ ಮಾಯಾವತಿ ತನ್ನ ಬೆಂಬಲವನ್ನು ಸರಕಾರಕ್ಕೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ