ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್‌ಗೆ ಕ್ಲೀನ್ ಚಿಟ್ ಕೊಟ್ಟ ಸಿಬಿಐ ವರದಿಗೆ ನಗರ ನ್ಯಾಯಾಲಯ ಮಂಗಳವಾರ ಸಹಮತ ವ್ಯಕ್ತಪಡಿಸುವ ಮೂಲಕ ತೀವ್ರ ವಿವಾದಕ್ಕೊಳಗಾಗಿದ್ದ ಟೈಟ್ಲರ್‌ಗೆ ದೊಡ್ಡ ಯಶ ಸಿಕ್ಕಂತಾಗಿದೆ.
ಟೈಟ್ಲರ್ ಅನ್ನು ವಿಚಾರಣೆಗೆ ಒಳಪಡಿಸಲು ಪುರಾವೆಯ ಕೊರತೆ ಇದೆ ಎಂದು ಹೆಚ್ಚುವರಿ ಮೆಟ್ರೋಪೊಲಿಟನ್ ನ್ಯಾಯಾಧೀಶ ರಾಕೇಶ್ ಪಂಡಿತ್ ಅವರು ತಿಳಿಸಿದ್ದಾರೆ.
ಸಿಖ್ ಹತ್ಯಾಕಾಂಡದ ಕುರಿತಂತೆ ಕ್ಯಾಲಿಫೋರ್ನಿಯಾ ಮೂಲದ ಸಾಕ್ಷಿ ಜಸ್ಬೀರ್ ಸಿಂಗ್ ಅವರ ಹೇಳಿಕೆ ಅಪ್ರಸ್ತುತ ಮತ್ತು ಇನ್ನೊರ್ವ ಸಾಕ್ಷಿ ಸುರೀಂದರ್ ಸಿಂಗ್ ಅವರ ಹೇಳಿಕೆ ಸ್ವ ವಿವಾದಾತ್ಮಕವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಾಜಿ ಕೇಂದ್ರ ಸಚಿವ ಟೈಟ್ಲರ್‌ಗೆ ಕ್ಲೀನ್ ಚಿಟ್ ನೀಡಿದ ಸಿಬಿಐ ವರದಿಯನ್ನು ಒಪ್ಪಿಕೊಂಡ ನ್ಯಾಯಾಲಯ, ಪ್ರಕರಣದ ಹೆಚ್ಚಿನ ತನಿಖೆ ನಡೆಸುವಂತೆ ಆದೇಶಿಸಲು ಯಾವುದೇ ಆಧಾರ ಇಲ್ಲ ಎಂದು ಕೂಡ ಹೇಳಿದೆ.
ಟೈಟ್ಲರ್ ವಿರುದ್ಧ ತನಿಖೆ ನಡೆಸಿದ್ದ ಸಿಬಿಐ 2007ರಲ್ಲಿ ಸಲ್ಲಿಸಿದ್ದ ವರದಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಟೈಟ್ಲರ್‌ಗೆ ಕ್ಲೀನ್ ಚಿಟ್ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ ವರದಿಯನ್ನು ಸಿಬಿಐ 2009ರ ಏಪ್ರಿಲ್ 2ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು.