ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೊರೆನ್ ವಿಶ್ವಾಸದ್ರೋಹ; ಬೆಂಬಲ ವಾಪಸ್ ಪಡೆದ ಬಿಜೆಪಿ (JMM | Congress | Jharkhand | Shibu Soren)
Bookmark and Share Feedback Print
 
ಬಿಜೆಪಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಯುಪಿಎ ಸರಕಾರದ ಪರ ಮತ ಚಲಾಯಿಸಿದ ಜಾರ್ಖಂಡ್ ಮುಕ್ತಿ ಮೋರ್ಛಾ ಮುಖ್ಯಸ್ಥ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೆನ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆದುಕೊಂಡಿದೆ.

ಇದರೊಂದಿಗೆ ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದ್ದ ಸೊರೆನ್ ಅವರ ಜಾರ್ಖಂಡ್ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.

ಮಂಗಳವಾರದ ಬೆಳವಣಿಗೆಯ ನಂತರ ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಿದ ನಂತರ ಜೆಎಂಎಂಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ಪಕ್ಷ ಬಂದಿದೆ.

ಯುಪಿಎ ಸರಕಾರದ ವಿರುದ್ಧ ಮಂಗಳವಾರ ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷ ಬಿಜೆಪಿಯ ಖಂಡನಾ ನಿರ್ಣಯದಲ್ಲಿ ಸೊರೆನ್ ಅವರ ಜೆಎಂಎಂ ಯುಪಿಎ ಪರ ಮತ ಚಲಾಯಿಸಿತ್ತು. ಇದರಿಂದ ಬಿಜೆಪಿ ಕ್ಷುದ್ರಗೊಂಡಿತ್ತು.

ಜೆಎಂಎಂ ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಹೊಂದಿದೆ. ಮುಖ್ಯಮಂತ್ರಿ ಸೊರೆನ್ ಇನ್ನೂ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಶಾಸಕನಾಗಿ ಆಯ್ಕೆಯಾಗದ ಹೊರತು ಆರು ತಿಂಗಳಿಗಿಂತ ಹೆಚ್ಚು ಸಮಯ ಮುಖ್ಯಮಂತ್ರಿಯಾಗಿ ಅವರು ಮುಂದುವರಿಯುವಂತಿಲ್ಲ. ಹಾಗಾಗಿ ಕಾಂಗ್ರೆಸ್ ಬೆಂಬಲ ಪಡೆದುಕೊಂಡು ತನ್ನ ಮಗನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ, ತಾನು ಕೇಂದ್ರದತ್ತ ಮರಳುವುದು ಸೊರೆನ್ ಲೆಕ್ಕಾಚಾರ. ಇದಕ್ಕೆ ಕಾಂಗ್ರೆಸ್ ಅಗತ್ಯ ವ್ಯೂಹವನ್ನು ರಚಿಸಿದೆ ಎಂದು ಹೇಳಲಾಗುತ್ತಿದೆ.

ಪ್ರಸಕ್ತ 81 ಸ್ಥಾನಗಳ ಜಾರ್ಖಂಡ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟವು 25 ಸ್ಥಾನಗಳನ್ನು, ಬಿಜೆಪಿ 20, ಜೆಎಂಎಂ 18 ಮತ್ತು ಇತರರು 18 ಸ್ಥಾನಗಳನ್ನು ಹೊಂದಿವೆ.

ಖಂಡನಾ ನಿರ್ಣಯದಲ್ಲಿ ಜೆಎಂಎಂ ಆಡಳಿತ ಪಕ್ಷದ ಪರ ಮತ ಚಲಾಯಿಸಿರುವುದಕ್ಕೆ ಬಿಜೆಪಿ ಆಘಾತ ವ್ಯಕ್ತಪಡಿಸಿದೆ. ಸೊರೆನ್ ನಮಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಈಗ ನಾವು ರಾಜ್ಯದಲ್ಲಿ ಅವರಿಗೆ ನೀಡಿರುವ ಬೆಂಬಲವನ್ನು ಮರು ಪರಿಶೀಲನೆ ನಡೆಸಲಿದ್ದೇವೆ ಎಂದು ಜಾರ್ಖಂಡ್ ಬಿಜೆಪಿ ವಕ್ತಾರ ಸಂಜಯ್ ಸೇಥ್ ತಿಳಿಸಿದ್ದರು.

ಶಿಬು ಸೊರೆನ್ ಒಂದು ಕಡೆಯಿಂದ ಬಿಜೆಪಿಯ ಬೆಂಬಲ ಪಡೆದುಕೊಂಡು, ಮತ್ತೊಂದು ಕಡೆಯಿಂದ ಖಂಡನಾ ನಿರ್ಣಯದ ವಿರುದ್ಧ ಮತ ಚಲಾಯಿಸುತ್ತಾರೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೈನ್ ಹೇಳಿದ್ದರು.

ಇದು ಕಣ್ತಪ್ಪು: ಜೆಎಂಎಂ
ಆದರೆ ಇವೆಲ್ಲ ಬೆಳವಣಿಗೆಗಳನ್ನು ತಳ್ಳಿ ಹಾಕಿರುವ ಜೆಎಂಎಂ, ಖಂಡನಾ ನಿರ್ಣಯದಲ್ಲಿ ಯುಪಿಎ ಪರ ಮತ ಚಲಾಯಿಸಿದ್ದು ಕಣ್ತಪ್ಪಿನಿಂದಾಗಿ. ಮಾನವ ಸಹಜ ಗೊಂದಲದಿಂದಾಗಿ ಇದು ನಡೆದು ಹೋಗಿದೆ. ನಾವು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ನಿನ್ನೆ ರಾತ್ರಿಯೇ ಭೇಟಿ ಮಾಡಿ, ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಎಂದು ಸೊರೆನ್ ಪುತ್ರ ಹಾಗೂ ರಾಜ್ಯಸಭಾ ಸದಸ್ಯ ಹೇಮಂತ್ ತಿಳಿಸಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಬಿಜೆಪಿ ಬೆಂಬಲ ವಾಪಸ್ ಪಡೆದುಕೊಂಡಿದೆ.

ಕಾಂಗ್ರೆಸ್ ಸಮರ್ಥನೆ..
ಜೆಎಂಎಂ ಯುಪಿಎ ಸರಕಾರದ ಪರ ಮತ ಚಲಾಯಿಸಿರುವುದನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಶಿಬು ಸೊರೆನ್ ಯುಪಿಎ ಮೈತ್ರಿಕೂಟದೊಂದಿಗೆ ಚುನಾವಣ ಪೂರ್ವ ಮೈತ್ರಿ ಹೊಂದಿದ್ದರಿಂದ ಅವರು ನಮ್ಮ ಪರವಾಗಿ ಸಂಸತ್ತಿನಲ್ಲಿ ಮತ ಚಲಾಯಿಸಿದ್ದಾರೆ ಎಂದು ಪಕ್ಷದ ವಕ್ತಾರ ವಕ್ತಾರ ಕೇಶವ್ ರಾವ್ ಹೇಳಿದ್ದಾರೆ.

ಆದರೆ ಜಾರ್ಖಂಡ್‌ನಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ