ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಧುರಿ ದೇಶದ್ರೋಹದ ಹಿಂದೆ ಐಎಸ್ಐ ಹಣ ಮತ್ತು ಪ್ರೇಮಿ! (Madhuri Gupta | ISI | Pakistan | Indian diplomat)
Bookmark and Share Feedback Print
 
ಇಸ್ಲಾಮಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಮಾಧುರಿ ಗುಪ್ತಾ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ನೀಡುತ್ತಿದ್ದ ಭಾರೀ ಮೊತ್ತದ ಹಣ ಮತ್ತು ತನ್ನ ಪ್ರಿಯಕರನಿಗಾಗಿ ಗೂಢಚಾರಿಕೆ ನಡೆಸಿದ್ದಳು ಎಂಬುದು ಇದೀಗ ಬಹಿರಂಗವಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪಾಕ್ ರಾಜಧಾನಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಾಧ್ಯಮ ಮತ್ತು ಮಾಹಿತಿ ವಿಭಾಗದಲ್ಲಿ ಎರಡನೇ ಹಂತದ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಮಾಧುರಿ ಕಳೆದ ಎರಡು ವರ್ಷಗಳಿಂದ ಭಾರತಕ್ಕೆ ಸಂಬಂಧಪಟ್ಟ ಗೌಪ್ಯ ರಕ್ಷಣಾ ಮಾಹಿತಿಗಳನ್ನು ಐಎಸ್‌ಐಗೆ ಹಸ್ತಾಂತರಿಸುತ್ತಿದ್ದ ಆರೋಪದ ಮೇಲೆ ಐದು ದಿನಗಳ ಹಿಂದೆಯೇ ಬಂಧನಕ್ಕೊಳಗಾಗಿದ್ದಾಳೆ.
Madhuri Gupta
PR

ಮೂಲಗಳ ಪ್ರಕಾರ ಆಕೆಗೆ ಐಎಸ್ಐ ಭಾರೀ ಪ್ರಮಾಣದ ಹಣ ನೀಡುತ್ತಿತ್ತು. ಅದನ್ನು ಮಾಧುರಿ ಪಾಕಿಸ್ತಾನಿ ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡಿ, ಬಳಿಕ ಭಾರತೀಯ ಬ್ಯಾಂಕುಗಳ ತನ್ನ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದಳು.

ಭಾರತದ ಬೇಹುಗಾರಿಕಾ ಸಂಸ್ಥೆ 'ರಾ' ಅಥವಾ 'ಸಂಶೋಧನಾ ಮತ್ತು ವಿಶ್ಲೇಷಣಾ ಸಂಸ್ಥೆ'ಯ ಇಸ್ಲಾಮಾಬಾದ್ ಘಟಕದ ಮುಖ್ಯಸ್ಥ ಆರ್.ಕೆ. ಶರ್ಮಾರಿಂದ ಅಮೂಲ್ಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದ ಮಾಧುರಿ, ಅದನ್ನು ಐಎಸ್ಐಗೆ ವರ್ಗಾಯಿಸುತ್ತಿದ್ದಳು. ಈಕೆಯನ್ನು ಐಎಸ್ಐ ತನ್ನ ಅಮೂಲ್ಯ ಆಸ್ತಿ ಎಂದು ಪರಿಗಣಿಸಿತ್ತು ಎಂದು ಹೇಳಲಾಗಿದ್ದು, ಶರ್ಮಾ ಪಾತ್ರದ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ.

ಮಾಧುರಿ ತಪ್ಪೊಪ್ಪಿಗೆ...
ಸರಕಾರಿ ರಹಸ್ಯಗಳ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ 53ರ ಹರೆಯದ ಮಾಧುರಿ ತನಿಖಾ ದಳಗಳಲ್ಲಿ ಹಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾಳೆ. ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲವಾದರೂ ಮೂಲಗಳ ಪ್ರಕಾರ ಈಕೆ ಪಾಕಿಸ್ತಾನದ ಖ್ಯಾತ ಪತ್ರಕರ್ತ 'ರಾಣಾ' ಎಂಬಾತನ ಮೂಲಕ ಐಎಸ್ಐ ಸಂಪರ್ಕಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಇಸ್ಲಾಮಾಬಾದ್‌ನ ಐಎಸ್ಐ ಅಧಿಕಾರಿಗಳನ್ನು ಈಕೆ ಭೇಟಿ ಮಾಡಿದ್ದಳು.

ಐಎಸ್ಐ ಪಾಕಿಸ್ತಾನದ ಜನಪ್ರಿಯ ಪತ್ರಕರ್ತ ರಾಣಾ ಎಂಬಾತನ ಮೂಲಕ ಮಾಧುರಿಯನ್ನು ಸಂಪರ್ಕಿಸಿತ್ತು. ಬಳಿಕ ಈಕೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯೊಂದಿಗೆ ಅಲಿಖಿತ ಒಪ್ಪಂದ ಮಾಡಿಕೊಂಡು ಅಮೂಲ್ಯ ಮಾಹಿತಿಗಳನ್ನು ರವಾನಿಸುತ್ತಿದ್ದಳು ಎಂದು ವರದಿಗಳು ಹೇಳಿವೆ.

ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲು ಭಾರತದ ತನಿಖಾ ಸಂಸ್ಥೆಗಳು ಆಕೆ ಪಾಕಿಸ್ತಾನದಲ್ಲಿ ಬಳಸುತ್ತಿದ್ದ ಕಂಪ್ಯೂಟರುಗಳು, ಮೊಬೈಲ್ ಮತ್ತಿತರ ಅಮೂಲ್ಯ ಪರಿಕರ, ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಆಕೆಯ ಇಮೇಲ್ ಖಾತೆಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಕಳೆದೆರಡು ವರ್ಷಗಳಲ್ಲಿ ಯಾವ ಖಾತೆಗಳಿಗೆ ಮಾಹಿತಿಗಳನ್ನು ರವಾನಿಸಲಾಗಿತ್ತು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಕುರುಡು ಪ್ರೇಮದ ಫಲ...
ವರದಿಗಳ ಪ್ರಕಾರ ಆಕೆ ಪಾಕಿಸ್ತಾನದ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆತ ಪಾಕ್ ಬೇಹುಗಾರಿಕಾ ಸಂಸ್ಥೆಯ ನಿಕಟ ವ್ಯಕ್ತಿ ಎಂದು ಹೇಳಲಾಗಿದ್ದು, ಇದೇ ಕಾರಣಕ್ಕಾಗಿ ರಕ್ಷಣಾ ಇಲಾಖೆ ಮತ್ತು ಅಫಘಾನಿಸ್ತಾನದ ಜತೆಗಿನ ಸಂಬಂಧದ ಕುರಿತ ಅಮೂಲ್ಯ ಮಾಹಿತಿಗಳನ್ನು ಮಾಧುರಿ ಹಸ್ತಾಂತರಿಸುತ್ತಿದ್ದಳು. ಆದರೆ ಆ 'ಪ್ರೇಮಿ' ಮೇಲೆ ಉಲ್ಲೇಖಿಸಲಾಗಿರುವ ಪತ್ರಕರ್ತ ರಾಣಾನೇ ಅಥವಾ ಬೇರೆ ವ್ಯಕ್ತಿಯೇ ಎಂಬುದು ಖಚಿತವಾಗಿಲ್ಲ.

ಮತ್ತೊಂದು ಮೂಲದ ಪ್ರಕಾರ ಮಾಧುರಿಗೆ ಭಾರತೀಯ ರಾಯಭಾರ ಕಚೇರಿಯಲ್ಲಿ ಭಡ್ತಿ ಸಿಕ್ಕಿಲ್ಲವೆಂಬ ನೋವಿತ್ತು. ಕಳೆದ ಹಲವು ವರ್ಷಗಳಿಂದ ರಾಯಭಾರ ಕಚೇರಿಯ ಮಾಧ್ಯಮ ವಿಭಾಗದಲ್ಲಿ ಉರ್ದು ಅನುವಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆಕೆಯತ್ತ ವಿದೇಶಾಂಗ ಇಲಾಖೆಯು ನಿರ್ಲಕ್ಷ್ಯವಹಿಸಿತ್ತು ಎನ್ನುವುದು ಆಕೆಯ ನೋವಾಗಿತ್ತು.

ರಾಯಭಾರಿ ಬಂಧನ ಗಂಭೀರ ವಿಚಾರ: ಕೃಷ್ಣ
ಪಾಕ್ ಪರ ಗೂಢಚಾರಿಕೆ ನಡೆಸುತ್ತಿದ್ದ ಭಾರತೀಯ ರಾಯಭಾರಿಯನ್ನು ಬಂಧಿಸಿರುವ ವಿಚಾರ ಗಂಭೀರವಾದದ್ದು ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ತನಿಖೆಗಳು ನಡೆಯುತ್ತಿವೆ. ತನಿಖೆ ಪೂರ್ಣಗೊಳ್ಳುವವರೆಗೆ ನಾವು ಕಾಯಬೇಕಾಗುತ್ತದೆ. ನಂತರ ಇದಕ್ಕೆ ಕಾರಣಗಳೇನು ಮತ್ತು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಪ್ರಸಕ್ತ ಭೂತಾನ್‌ನಲ್ಲಿರುವ ಸಚಿವರು ತಿಳಿಸಿದ್ದಾರೆ.

ಇದು ಭಾರತಕ್ಕೆ ಸಂಬಂಧಪಟ್ಟ ವಿಚಾರ...
ಹೀಗೆಂದು ಜಾರಿಕೊಂಡಿರುವುದು ಪಾಕಿಸ್ತಾನ. ಭಾರತದ ರಾಯಭಾರ ಕಚೇರಿಯ ಸಿಬ್ಬಂದಿಯೊಂದಿಗೆ ತನ್ನ ಬೇಹುಗಾರಿಕಾ ಸಂಸ್ಥೆ ಐಎಸ್ಐ ಸಂಬಂಧ ಹೊಂದಿತ್ತು ಮತ್ತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿತ್ತು ಎಂಬ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡದ ಪಾಕ್, ಈ ಕುರಿತು ಯಾವುದೇ ತನಿಖೆ ನಡೆಸುವ ಇರಾದೆಯಿಲ್ಲ ಎಂದು ಹೇಳಿದೆ.

ಇದು ಭಾರತದ ಆಂತರಿಕ ವಿಚಾರ. ಈ ಕುರಿತು ನಾವು ಏನೂ ಹೇಳಲು ಬಯಸುವುದಿಲ್ಲ. ನಮಗೇನೂ ತಿಳಿದಿಲ್ಲ. ಭಾರತ ಈ ಕುರಿತು ಅಧಿಕೃತವಾಗಿ ಯಾವುದೇ ವಿಚಾರವನ್ನು ಪ್ರಸ್ತಾಪಿಸಿಲ್ಲ. ಮಾಧ್ಯಮ ವರದಿಗಳ ಮೂಲಕ ನಾವು ತಿಳಿದಿದ್ದೇವೆ. ಹಾಗಾಗಿ ಪ್ರತಿಕ್ರಿಯೆ ನೀಡಲಾಗದು. ಆದರೆ ಇದು ಸಾರ್ಕ್ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಿನ ಪ್ರಧಾನಿಗಳ ಭೇಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಭರವಸೆ ನಮ್ಮದು ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು:
ಪಾಕ್ ಪರ ಗೂಢಚಾರಿಕೆ; ಭಾರತೀಯ ರಾಯಭಾರಿ ಸೆರೆ
ಸಂಬಂಧಿತ ಮಾಹಿತಿ ಹುಡುಕಿ