ಇಂಡಿಯನ್ ಪ್ರೀಮಿಯರ್ ಲೀಗ್ ಹಗರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವರುಗಳಾದ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ರಾಜೀನಾಮೆಯನ್ನು ಬಿಜೆಪಿ ಯಾಕೆ ಕೇಳುತ್ತಿಲ್ಲ ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿ ಪ್ರಶ್ನಿಸಿದ್ದು, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ.
ಪಟೇಲ್ ಮತ್ತು ಅವರ ಮಗಳು ಹಲವು ನಿಯಮಗಳನ್ನು ಉಲ್ಲಂಘಿಸಿದ್ದರೂ ಸಚಿವರ ರಾಜೀನಾಮೆಯನ್ನು ಯಾಕೆ ಕೇಳುತ್ತಿಲ್ಲ ಎಂದು ಇಂದು ಬೆಳಿಗ್ಗೆ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೇನಕಾ ಪ್ರಶ್ನಿಸಿದರು.
ಐಪಿಎಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಶಶಿ ತರೂರ್ ರಾಜೀನಾಮೆ ಬೇಡಿಕೆ ಮುಂದಿಟ್ಟು ಯಶಸ್ವಿಯಾದ ನಂತರ ಪಕ್ಷವು ಅದೇ ವಿವಾದಕ್ಕೆ ಸಂಬಂಧಪಟ್ಟ ಉಳಿದ ವಿಚಾರಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದರು.
ಭಯೋತ್ಪಾದನಾ ದಾಳಿಯಿಂದ ಮುಂಬೈ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಎನ್ಎಸ್‍ಜಿ ಕಮಾಂಡೋಗಳಿಗೆ ವಿಮಾನ ಮೂಲಕ ಘಟನೆ ನಡೆದ ಸ್ಥಳಕ್ಕೆ ತಲುಪಲು ಎಂಟು ಗಂಟೆ ಬೇಕಾಯಿತು. ಆದರೆ ಐಪಿಎಲ್ ಕ್ರಿಕೆಟಿಗರಿಗೆ ಏರ್ ಇಂಡಿಯಾವು ಕೇವಲ ಒಂದು ಗಂಟೆಯೊಳಗೆ ಬಾಡಿಗೆ ವಿಮಾನ ಏರ್ಪಡಿಸಿರುವುದು ವಿಪರ್ಯಾಸವೇ ಸರಿ ಎಂದವರು ಹೇಳಿದರು.
ಪ್ರಫುಲ್ ಪಟೇಲ್ ಪುತ್ರಿ ಹಾಗೂ ಐಪಿಎಲ್ ಆತಿಥ್ಯ ವಿಭಾಗದ ವ್ಯವಸ್ಥಾಪಕಿಯಾಗಿರುವ ಪೂರ್ಣಾ ಪಟೇಲ್ ನಿಗದಿಯಾಗಿದ್ದ ಏರ್ ಇಂಡಿಯಾ ಪ್ರಯಾಣಿಕರ ವಿಮಾನವನ್ನು ಬಾಡಿಗೆ ವಿಮಾನವನ್ನಾಗಿ ಪಡೆದುಕೊಂಡಿದ್ದ ವಿವಾದಕ್ಕೆ ಸಂಬಂಧಪಟ್ಟಂತೆ ಮೇನಕಾ ಪ್ರಸ್ತಾಪಿಸಿದರು.
ಪಕ್ಷದ ಮೂಲಗಳ ಪ್ರಕಾರ ಮೇನಕಾ ಗಾಂಧಿಯವರು ಪರೋಕ್ಷವಾಗಿ ದಾಳಿ ನಡೆಸಿದ್ದು ಜೇಟ್ಲಿಯವರ ಮೇಲೆ. ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಬಿಸಿಸಿಐ ಉಪಾಧ್ಯಕ್ಷರಾಗಿರುವ ಜೇಟ್ಲಿಯವರು ಬಿಸಿಸಿಐ ಮಾಜಿ ಮುಖ್ಯಸ್ಥ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಅವರ ಜತೆ ನಿಕಟ ಸಂಬಂಧ ಹೊಂದಿರುವುದರಿಂದ ಪಕ್ಷವು ರಾಜೀನಾಮೆ ಕೇಳಿರಲಿಲ್ಲ ಎಂದು ಹೇಳಲಾಗಿದೆ.
ಅದೇ ಹೊತ್ತಿಗೆ ಮೇನಕಾ ಗಾಂಧಿ ನಿಲುವಿಗೆ ಹಿರಿಯ ನಾಯಕ ಯಶವಂತ್ ಸಿನ್ಹಾ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಪವಾರ್ ಮತ್ತು ಪಟೇಲ್ ಅವರ ರಾಜೀನಾಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ದೂರವಾಣಿ ಕದ್ದಾಲಿಕೆ ಪ್ರಕರಣ ಮತ್ತು ಐಪಿಎಲ್ ಹಗರಣಗಳಿಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ರಚಿಸುವ ಬೇಡಿಕೆಯನ್ನು ಸಂಸತ್‌ನ ಹೊರಗಡೆ ತಳ್ಳಿ ಹಾಕಿದ್ದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ಹಕ್ಕು ಚ್ಯುತಿ ಮಂಡಿಸಬೇಕು ಎಂದೂ ಸಿನ್ಹಾ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ನಿಖರ ಪುರಾವೆಯಿಲ್ಲದ ಹಿನ್ನೆಲೆಯಲ್ಲಿ ಪವಾರ್ ಹಾಗೂ ಪಟೇಲ್‌ರವರ ರಾಜೀನಾಮೆಗೆ ಒತ್ತಡ ಹೇರಬಾರದು ಎಂದು ರಾಜಸಭೆಯ ಪ್ರತಿಪಕ್ಷದ ಉಪನಾಯಕ ಎಸ್.ಎಸ್. ಅಹ್ಲುವಾಲಿಯಾ ಅಭಿಮತಕ್ಕೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಅಂತಿಮವಾಗಿ ಗಾಂಧಿ ಸಲಹೆಗೆ ಪ್ರತಿಕ್ರಿಯಿಸಿದ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ಮರಾಜ್, ಪಕ್ಷವು ಆಕೆಯ ಬೇಡಿಕೆಗೆ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.