ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗದ ಜಂಟಿ ಕಾರ್ಯದರ್ಶಿ ಕರ್ನಾಟಕ ಮೂಲದ ಒ. ರವಿ ಎಂಬಾತ ಉದ್ಯಮಿಯೊಬ್ಬರಿಂದ 50 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದಿದ್ದಾನೆ.
52ರ ಹರೆಯದ ಈ ವ್ಯಕ್ತಿ 1983ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಗೃಹ ಸಚಿವಾಲಯದ ಪ್ರಮುಖ ಹುದ್ದೆಯಲ್ಲಿದ್ದ. ಈತನನ್ನು ಇದೀಗ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಅಲೋಕ್ ಖಿಮಾನಿ ಎಂಬ ಉದ್ಯಮಿಯಿಂದ 50 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪವನ್ನು ರವಿ ಮೇಲೆ ಹೊರಿಸಲಾಗಿದೆ.
ಮೂಲಗಳ ಪ್ರಕಾರ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯನ್ನಾಗಿ ರವಿಯನ್ನು ಕೇಂದ್ರ ಸರಕಾರವು ನೇಮಿಸಿತ್ತು. ಬಳಿಕ ಭಾರೀ ಪ್ರಮಾಣದ ತೆರಿಗೆಯಿಂದ ತಪ್ಪಿಸಿಕೊಂಡಿದ್ದ ಆರೋಪವನ್ನು ಖಿಮಾನಿ ಮೇಲೆ ಈ ಅಧಿಕಾರಿ ಹೊರಿಸಿದ್ದ. ಇದೇ ಕಾರಣದಿಂದ ಉದ್ಯಮಿಯು ರವಿಯನ್ನು ಈ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಪಣತೊಟ್ಟಿದ್ದ.
ಈ ಸಂಬಂಧ ದೂರು ಸ್ವೀಕರಿಸಿದ್ದ ಸಿಬಿಐ, ರವಿಯ ನವದೆಹಲಿಯಲ್ಲಿ ನಿವಾಸದ ಮೇಲೂ ದಾಳಿ ನಡೆಸಿದೆ. ಆತನಿಗೆ ಸಂಬಂಧಪಟ್ಟ ಇತರ ಮೂಲಗಳಲ್ಲೂ ಸಿಬಿಐ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸಿಬಿಐ ಗೃಹ ಸಚಿವಾಲಯದ ಮತ್ತೊಬ್ಬ ಅಧಿಕಾರಿಯ ಮೇಲೂ ದಾಳಿ ನಡೆಸಿದೆ. ಗೃಹ ಸಚಿವಾಲಯದ ಭಾರತೀಯ ರೈಲ್ವೇ ಸೇವೆಯ ನಿರ್ದೇಶಕ ಶ್ರೇಣಿಯ ಅಧಿಕಾರಿ ಶರ್ಮಾ ಎಂಬಾತ ಗುತ್ತಿಗೆಗಳನ್ನು ನೀಡುವ ಸಂಬಂಧ 10 ಲಕ್ಷ ರೂಪಾಯಿ ಲಂಚ ಪಡೆದಿದ್ದ ಎಂದು ಆರೋಪಿಸಲಾಗಿದೆ.