ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣದಲ್ಲೂ ಫೋನ್ ಟ್ಯಾಪಿಂಗ್; ಪ್ರತಿಪಕ್ಷಗಳಿಂದ ಗದ್ದಲ (Telephone tapping | A Raja | Lok Sabha | 2G telecom spectrum)
Bookmark and Share Feedback Print
 
ಕೇಂದ್ರ ಸರಕಾರವು ಯಾರ ದೂರವಾಣಿ ಕದ್ದಾಲಿಕೆಗೂ ಅನುಮತಿ ನೀಡಿಲ್ಲ ಎಂಬ ಸ್ಪಷ್ಟನೆ ಬಂದ ಎರಡೇ ದಿನಗಳಲ್ಲಿ ಮತ್ತೊಂದು ಫೋನ್ ಟ್ಯಾಪಿಂಗ್ ಪ್ರಕರಣ ಹೊರ ಬಿದ್ದಿದ್ದು, ಕೇಂದ್ರ ಗೃಹ ಸಚಿವಾಲಯವೇ ಇದಕ್ಕೆ ಒಪ್ಪಿಗೆ ನೀಡಿರುವುದನ್ನು ಪತ್ರಿಕೆಯೊಂದು ಬಹಿರಂಗಪಡಿಸಿದೆ. ಕೇಂದ್ರ ದೂರಸಂಪರ್ಕ ಇಲಾಖೆಯ 2ಜಿ ತರಂಗಾಂತರ ಹಂಚಿಕೆ ಸಂಬಂಧ ಇದು ನಡೆದಿದ್ದು, ಇಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳು ಭಾರೀ ಗದ್ದಲ ಎಬ್ಬಿಸಿವೆ.

2008ರಲ್ಲಿ 2ಜಿ ತರಂಗಾಂತರ ಹಂಚಿಕೆ ಸಂದರ್ಭದಲ್ಲಿ ದೂರಸಂಪರ್ಕ ಸಚಿವ ಎ. ರಾಜಾ ಅವರು ಇತರ ಹಲವು ಉದ್ಯಮಿಗಳ ಜತೆ ನಡೆಸಿರುವ ಮಾತುಕತೆಯನ್ನು ಆದಾಯ ತೆರಿಗೆ ಇಲಾಖೆಯ ತನಿಖಾ ದಳವು ಟ್ಯಾಪ್ ಮಾಡಿತ್ತು ಮತ್ತು ಇದಕ್ಕೆ ಕೇಂದ್ರ ಗೃಹ ಸಚಿವಾಲಯವು ಒಪ್ಪಿಗೆ ಸೂಚಿಸಿತ್ತು ಎಂದು 'ದಿ ಪಯೋನಿಯರ್' ಪತ್ರಿಕೆಯು ತನಿಖಾ ವರದಿಯನ್ನು ಇಂದು ಪ್ರಕಟಿಸಿತ್ತು.

ಇದನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಎಐಎಡಿಎಂಕೆ ಸದಸ್ಯರು ಪ್ರಸ್ತಾಪಿಸುತ್ತಾ, ಸಚಿವ ರಾಜಾ ಅವರು ನಡೆಸಿರುವ ಭ್ರಷ್ಟಾಚಾರಕ್ಕಿದು ಸಮರ್ಥ ಸಾಕ್ಷ್ಯ ಎಂದು ಗದ್ದಲ ಎಬ್ಬಿಸಿದ್ದವು.

ಎಐಎಡಿಎಂಕೆ ಮುಖಂಡ ಎಂ. ತಂಬಿ ದೊರೈ ಮಾಧ್ಯಮ ವರದಿಯನ್ನು ಉಲ್ಲೇಖಿಸುತ್ತಾ, ಡಿಎಂಕೆ ಸಚಿವ ರಾಜಾ ಅವರು ನಡೆಸಿದ ಭ್ರಷ್ಟಾಚಾರದಿಂದಾಗಿ ಸರಕಾರದ ಖಜಾನೆಗೆ ಒಂದು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದರು. ಇವರಿಗೆ ಎಡಪಕ್ಷಗಳು ಮತ್ತು ಸಂಯುಕ್ತ ಜನತಾದಳ ಪಕ್ಷಗಳು ಬೆಂಬಲ ನೀಡಿದರು.

ಈ ಹೊತ್ತಿನಲ್ಲಿ ಡಿಎಂಕೆ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ತಮಿಳುನಾಡಿನ ಎರಡು ಪಕ್ಷಗಳ ಸದಸ್ಯರ ನಡುವೆ ಬಿಸಿ ಬಿಸಿ ಚರ್ಚೆಗಳು ನಡೆದವು.

ಇದೇ ರೀತಿ ರಾಜ್ಯಸಭೆಯಲ್ಲೂ ಕೋಲಾಹಲ ನಡೆದಿದೆ. ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿಯವರು ಸರಕಾರದ ಇಬ್ಬಗೆ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ದೂರವಾಣಿ ಕದ್ದಾಲಿಕೆ ಪ್ರಕರಣ ಬಹಿರಂಗವಾದಾಗ, ಅಂತಹ ಯಾವುದೇ ಪ್ರಕರಣ ನಡೆದಿಲ್ಲ; ಸರಕಾರವು ಅಂತಹ ಅಧಿಕಾರವನ್ನು ಯಾರಿಗೂ ನೀಡಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದರು. ಆದರೆ ಇಂದು ದೂರವಾಣಿ ಕದ್ದಾಲಿಕೆಗೆ ಅನುಮತಿ ನೀಡಿದ್ದ ಮತ್ತೊಂದು ವರದಿ ಪ್ರಕಟವಾಗಿದೆ. ಪ್ರಧಾನ ಮಂತ್ರಿಯವರು ಉದ್ಯಮ ಮುಖಂಡರಿಗೂ ಸಚಿವ ಸ್ಥಾನಗಳನ್ನು ಹಂಚಿದ್ದಾರೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗುತ್ತಿದೆ. 2ಜಿ ತರಂಗಾಂತರ ಹಂಚಿಕೆಗೂ ಇದರಲ್ಲಿ ಸಂಬಂಧ ಇದ್ದಂತಿದೆ ಎಂದು ಜೇಟ್ಲಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರದಿಯ ಪ್ರಕಾರ 2008ರಲ್ಲಿ ನಡೆದ 2ಜಿ ತರಂಗಾಂತರ ಹಂಚಿಕೆ ಸಂದರ್ಭದಲ್ಲಿ ಉದ್ಯಮಿಯೆಂದು ಪೋಸ್ ಕೊಡುತ್ತಿದ್ದ ಮಹಿಳೆಯೊಬ್ಬರ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಸಚಿವ ರಾಜಾ, ಹಲವು ಅಕ್ರಮಗಳಿಗೆ ಕಾರಣರಾಗಿದ್ದರು. ಈಕೆಯ ಜತೆ ಸಚಿವರು ನೇರ ಮಾತುಕತೆ ನಡೆಸುತ್ತಿರುವುದನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಇತರ ಹಲವು ಉದ್ಯಮಿಗಳ ಜತೆ ಸಂಭಾಷಣೆ ನಡೆಸಿರುವುದನ್ನು ಕೂಡ ಕದ್ದಾಲಿಕೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಉಭಯ ಸದನಗಳಲ್ಲಿ ಗದ್ದಲ ನಡೆದು ಸಚಿವರ ರಾಜೀನಾಮೆಗೆ ಆಗ್ರಹಿಸಲಾಯಿತು. ಇಂದು ಸಚಿವ ರಾಜಾ ಕಲಾಪದಿಂದ ದೂರವೇ ಉಳಿದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ