ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾರಣಾಂತಿಕ ವಿಕಿರಣ ಸೋರಿಕೆ ಮೂಲ ದೆಹಲಿ ವಿಶ್ವವಿದ್ಯಾಲಯ! (Radiation leak | Delhi University Chemistry lab | Cobalt-60 | Gamma Irradiator)
Bookmark and Share Feedback Print
 
ಕಳೆದ ಒಂದೆರಡು ವಾರದಿಂದ ತೀವ್ರ ನಿಗೂಢತೆ ಮತ್ತು ಭೀತಿ ಸೃಷ್ಟಿಸಿದ್ದ ವಿಕಿರಣ ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲಾಗಿದ್ದು, ದೆಹಲಿ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿದ್ದ ಕೋಬಾಲ್ಟ್-60ಯೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಕಿರಣ ಸೋರಿಕೆಯಿಂದಾಗಿ ಇತ್ತೀಚೆಗಷ್ಟೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಹಲವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಪ್ರಕಾರ ಮೂಲಧಾತು (ಕೋಬಾಲ್ಟ್-60) ಹೊಂದಿರುವ ಈ 'ಗಾಮಾ ಇರಾಡಿಯೇಟರ್'ನ್ನು 1968ರಲ್ಲಿ ಕೆನಡಾದಿಂದ ತರಲಾಗಿತ್ತು. ಆದರೆ ಅದು ಸುಮಾರು 25 ವರ್ಷಗಳಿಂದ ಅಂದರೆ ಅದು 1985ರಿಂದ ಬಳಕೆಯಲ್ಲಿರಲಿಲ್ಲ. ಇದೇ ವರ್ಷದ ಫೆಬ್ರವರಿಯಲ್ಲಿ ಮಾಯಾಪುರಿಯ ಗುಜುರಿ ವ್ಯಾಪಾರಿಗಳು ಹರಾಜಿನ ಮೂಲಕ ಇದನ್ನು ಪಡೆದುಕೊಂಡಿದ್ದರು.

ನಾವು ಈ ರೇಡಿಯೋ ವಿಕಿರಣ ವಸ್ತುವಿನ ಮೂಲವನ್ನು ದೆಹಲಿ ಯುನಿವರ್ಸಿಟಿಯ ಕೆಮೆಸ್ಟ್ರಿ ಡಿಪಾರ್ಟ್‌ಮೆಂಟ್‌ನಲ್ಲಿ ಪತ್ತೆ ಹಚ್ಚಿದ್ದೇವೆ. ಗುಜುರಿ ವ್ಯಾಪಾರಸ್ಥರು ಅಲ್ಲಿಂದ ಹರಾಜಿನಲ್ಲಿ ಪಡೆದುಕೊಂಡು ತಂದಿರುವ ಪರಿಕರ ಗಾಮಾ ಇರಾಡಿಯೇಟರ್ ಎಂದು ದೆಹಲಿ ದಕ್ಷಿಣ ವಲಯದ ಜಂಟಿ ಪೊಲೀಸ್ ಆಯುಕ್ತ ಅಜಯ್ ಕಶ್ಯಪ್ ತಿಳಿಸಿದ್ದಾರೆ.

ಗುಜುರಿ ವ್ಯಾಪಾರಸ್ಥರು ಆ ಗಾಮಾ ಇರಾಡಿಯೇಟರ್ ಅನ್ನು ತಮ್ಮ ನೆಲೆಗೆ ತಂದ ನಂತರ ಅದರ ಕವಚವನ್ನು ಭೇದಿಸಿದ್ದಾರೆ. ಈ ಹಂತದಲ್ಲಿ ವಿಕಿರಣ ಹೊರಗೆ ಬಂದಿದೆ. ಪರಿಣಾಮ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಕಶ್ಯಪ್ ವಿವರಣೆ ನೀಡಿದ್ದಾರೆ.

1985ರಿಂದ ಈ ಪರಿಕರ ಯುನಿವರ್ಸಿಟಿಯಲ್ಲಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಕೊಠಡಿಯೊಂದರಲ್ಲಿತ್ತು. ಇದೇ ವರ್ಷ ಅದನ್ನು ಮಾರಾಟ ಮಾಡಲು ವಿಶ್ವವಿದ್ಯಾಲಯದ ಸಮಿತಿಯು ನಿರ್ಧಾರ ಮಾಡಿ, ಹರಾಜಿನ ಮೂಲಕ ಮಾರಾಟ ಮಾಡಿತ್ತು.

ವಿಕಿರಣ ಸೋರಿಕೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗುಜುರಿ ಅಂಗಡಿಯ ನಾಲ್ವರು ಕೆಲಸಗಾರರಿಗೆ ಗಾಮಾ ಇರಾಡಿಯೇಟರ್ ಚಿತ್ರವನ್ನು ತೋರಿಸಿದಾಗ, ಅವರಲ್ಲೊಬ್ಬ ಅದರ ಗುರುತು ಪತ್ತೆ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ ಮೊದಲ ವಾರದಲ್ಲಿ ವಿಕಿರಣ ಸೋರಿಕೆಯಿಂದಾಗಿ ತೀವ್ರವಾಗಿ ಗಾಯಗೊಂಡು 11 ಮಂದಿ ಆಸ್ಪತ್ರೆಗೆ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಇದೇ ಗುಂಪಿನಲ್ಲಿ ಓರ್ವ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ