ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆಯೊಬ್ಬ ಗಂಭೀರವಾಗಿ ಗಾಯಗೊಂಡು ಕೋಮಾಸ್ಥಿತಿಗೆ ತಲುಪಿದ್ದ ವೇಳೆ ಸಂಬಂಧಿಕರು ಯಾವುದೋ ಬ್ಲಡ್ ಬ್ಯಾಂಕಿನಿಂದ ರಕ್ತ ತಂದು ಬದುಕಿಸಿದ್ದರು. ದುರದೃಷ್ಟಕರ ಸಂಗತಿಯೆಂದರೆ ಸತ್ತು ಬದುಕಿದ ವ್ಯಕ್ತಿ ಈಗ ಎಚ್‌ಐವಿ ಪಾಸಿಟಿವ್!
ಆತನ ಬಾಳಿಗೆ ಇಂತಹ ಒಂದು ನರಕಸದೃಶತೆಯನ್ನು ಒದಗಿಸಿರುವ ಈ ಘಟನೆ ನಡೆದಿರುವುದು ಆಂಧ್ರಪ್ರದೇಶ ಕರಾವಳಿ ನಗರ ರಾಜಮಂಡ್ರಿಯಲ್ಲಿ. ರಕ್ತ ಕೊಟ್ಟ ಬ್ಲಡ್ 'ಜಾಗೃತಿ ಬ್ಲಡ್ ಬ್ಯಾಂಕ್' ವಿರುದ್ಧ ಇದೀಗ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಮೊದಲ ಹಂತವಾಗಿ ಅದರ ಮಾಲಕನನ್ನು ಬಂಧಿಸಿ ಪರವಾನಗಿಯನ್ನು ರದ್ದುಪಡಿಸಿದೆ.
ಅದು ಎಚ್ಐವಿ ಪೀಡಿತನ ರಕ್ತವಾಗಿತ್ತು.. ಏಪ್ರಿಲ್ 25ರಂದು ಈ ಕಾನ್ಸ್‌ಟೇಬಲ್ ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಇಲ್ಲಿನ ಅಭಯಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಂತರ ಕೋಮಾ ಸ್ಥಿತಿಗೆ ತಲುಪಿದ್ದ. ವೈದ್ಯರ ಸಲಹೆಯಂತೆ ರೋಗಿಯ ಸಂಬಂಧಿಕರು ಪಕ್ಕದ ರಕ್ತ ಬ್ಯಾಂಕಿನಿಂದ ಎರಡು ಸ್ಯಾಶೆ ರಕ್ತ ತಂದಿದ್ದರು. ಅದರಲ್ಲಿ ಒಂದನ್ನು ರೋಗಿಗೆ ಪೂರಣ ಮಾಡಲಾಗಿತ್ತು.
ನಂತರ ಪೇದೆಯ ಸ್ಥಿತಿ ಗಂಭೀರವಾದಾಗ ನಗರದ ಸ್ವತಂತ್ರ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಸೇರಿಸಲಾಯಿತು. ಅಲ್ಲಿನ ವೈದ್ಯರು ಉಳಿದಿದ್ದ ಮತ್ತೊಂದು ಸ್ಯಾಶೆಯ ರಕ್ತವನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಆಘಾತವಾಗಿತ್ತು. ಯಾಕೆಂದರೆ ಅದು ಎಚ್ಐವಿ ಬಾಧಿತ ರಕ್ತವಾಗಿತ್ತು.
ನಂತರ ಕಾನ್ಸ್‌ಟೇಬಲ್ ದೇಹದ ರಕ್ತವನ್ನು ಹಲವು ಪರೀಕ್ಷೆಗಳಿಗೊಳಪಡಿಸಲಾಗಾದಿದ್ದು, ಆತನಿಗೆ ನೀಡಿರುವುದು ಎಚ್‌ಐವಿ ಬಾಧಿತ ವ್ಯಕ್ತಿಯ ರಕ್ತ ಎಂಬುದು ಖಚಿತವಾಗಿದೆ. ಸುದ್ದಿ ಸಂಬಂಧಿಕರಿಗೆ ತಿಳಿಯುತ್ತಿದ್ದಂತೆ ಬ್ಲಡ್ ಬ್ಯಾಂಕ್‌ಗೆ ನುಗ್ಗಿ ತೀವ್ರ ದಾಂಧಲೆ ಎಬ್ಬಿಸಿದ್ದಾರೆ.
ಆರೋಗ್ಯ ಅಧಿಕಾರಿಗಳು ತನಿಖೆ ನಡೆಸಿದಾಗ 'ಜಾಗೃತಿ ಬ್ಲಡ್ ಬ್ಯಾಂಕ್'ನಲ್ಲಿ ಏಪ್ರಿಲ್ 18ರಂದು ಎಚ್ಐವಿ ಪೀಡಿತನ ರಕ್ತವನ್ನು ಸಂಗ್ರಹಿಸಲಾಗಿರುವುದು ಬೆಳಕಿಗೆ ಬಂತು. ಆದರೆ ಇದಕ್ಕೆ ಬೇಕಾಗಿದ್ದ ಅಗತ್ಯ ಪರೀಕ್ಷೆಯನ್ನು ಬ್ಲಡ್ ಬ್ಯಾಂಕ್ ನಡೆಸಿರಲಿಲ್ಲ.