ಶಿಬು ಸೊರೆನ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಬಿಜೆಪಿ ವಾಪಸ್ ಪಡೆಯುವುದಾಗಿ ಘೋಷಿಸಿದ್ದರೂ ತಾನು ಜಾರ್ಖಂಡ್ ರಚನೆ ಸಂಬಂಧ ಯಾವುದೇ ಆತುರದ ನಿರ್ಧಾರಕ್ಕೆ ಮುಂದಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ನಮಗೆ ಆತುರವಿಲ್ಲ. ಜಾರ್ಖಂಡ್ ರಾಜಕೀಯ ಬೆಳವಣಿಗೆಯನ್ನು ನಾವು ಹತ್ತಿರದಿಂದ ವೀಕ್ಷಿಸುತ್ತಿದ್ದು, ನಮಗೆ ಎಲ್ಲಾ ಮಾರ್ಗಗಳು ಮುಕ್ತವಾಗಿದೆ ಎಂದು ಎಐಸಿಸಿ ವಕ್ತಾರ ಮೋಹನ್ ಪ್ರಕಾಶ್ ತಿಳಿಸಿದ್ದಾರೆ.
ಜಾರ್ಖಂಡ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಬಿಜೆಪಿ ಅಧಿಕೃತ ಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭಿಮತ ವ್ಯಕ್ತಪಡಿಸಿದೆ.
ಜಾರ್ಖಂಡ್‌ನಲ್ಲಿ ಯಾವತ್ತೂ ಪಾರದರ್ಶಕತೆಯ ಸರಕಾರ ಒದಗಿಸುವ ಸಂಕಲ್ಪವನ್ನು ಕಾಂಗ್ರೆಸ್ ಹೊಂದಿದೆ. ಅಲ್ಲದೆ ಅಭಿವೃದ್ದಿಗೆಯೇ ಮೊದಲ ಆದ್ಯತೆ ಎಂದು ಪ್ರಕಾಶ್ ತಿಳಿಸಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಇದು ಏಳನೇ ಬಾರಿ. ಸಂಸತ್‌ನಲ್ಲಿ ಬಿಜೆಪಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಯುಪಿಎ ಸರಕಾರದ ಪರ ಸೊರೆನ್ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಜೆಎಂಎಂ ಆಡಳಿತ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲು ಬಿಜೆಪಿ ನಿರ್ಧರಿಸಿತ್ತು. ಈ ಸಂಬಂಧ ರಾಜ್ಯಪಾಲ ಎಂ.ಒ.ಎಚ್. ಫಾರೂಕ್‌ಗೆ ಪತ್ರ ರವಾನಿಸಲಾಗಿದೆ.
ಸರಕಾರವನ್ನು ಬಚಾವ್ ಮಾಡಲು ಬುಧವಾರ ರಾತ್ರಿ ಅಂತಿಮ ಯತ್ನ ನಡೆಸಿದ್ದ ಸೊರೆನ್ ಮಗ ಹಾಗೂ ಜೆಎಂಎಂ ಶಾಸಕ ಹೇಮಂತ್, ಬಿಜೆಪಿಯಲ್ಲಿ ಮರುಪರಿಶೀಲನೆ ನಡೆಸುವಂತೆ ಕೇಳಿಕೊಂಡಿದ್ದರು. ಬಿಜೆಪಿ ಪಕ್ಷ ಬಯಸಿದ್ದಲ್ಲಿ ಮುಖ್ಯಮಂತ್ರಿ ಶಿಬು ಸೊರೆನ್ ರಾಜೀನಾಮೆ ನೀಡಲು ತಯಾರಾಗಿದ್ದಾರೆಂದು ಅವರು ಹೇಳಿದ್ದರು.