ದೆಹಲಿಯಲ್ಲಿದ್ದ ಸ್ವಾಭಿಮಾನ ಹೊಂದಿದ್ದ ಏಕೈಕ ಮರಾಠಿ ನಾಯಕರೆಂದರೆ ಅದು ಮಾಜಿ ವಿತ್ತ ಸಚಿವ ಸಿ.ಡಿ. ದೇಶ್‌ಮುಖ್. ಉಳಿದವರೆಲ್ಲರೂ ಹೆದರು ಪುಕ್ಕಲರು ಎಂದು ಶಿವಸೇನಾ ವರಿಷ್ಠ ಬಾಳ ಠಾಕ್ರೆ ಬಣ್ಣಿಸಿದ್ದಾರೆ.
ಪ್ರತ್ಯೇಕ ಮರಾಠಿ ಭಾಷಿಗರ ಮಹಾರಾಷ್ಟ್ರದಿಂದ ಮುಂಬೈಯನ್ನು ಕೈ ಬಿಡುವ ಪ್ರಸ್ತಾಪವನ್ನು ವಿರೋಧಿಸಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಹೊರ ಬಂದಿದ್ದ ಸಿ.ಡಿ. ದೇಶ್‌ಮುಖ್ ಒಬ್ಬರೇ ದೆಹಲಿಯಲ್ಲಿ ಸ್ವಾಭಿಮಾನ ಹೊಂದಿದ್ದ ಮರಾಠಿ ನಾಯಕರಾಗಿದ್ದರು. ಉಳಿದ ಎಲ್ಲರೂ ಹೆದರು ಪುಕ್ಕಲರಾಗಿದ್ದರು ಎಂದು ಠಾಕ್ರೆ ಹೇಳಿದ್ದಾರೆ.
ಮುಂಬೈಗಾಗಿನ ಹೋರಾಟದಲ್ಲಿ ಅಂದು ಗೆಲುವು ಸಾಧಿಸಲು ಮರಾಠಿ ಜನತೆಯ ಒಗ್ಗಟ್ಟೇ ಕಾರಣ. ಆದರೆ ಆ ಒಗ್ಗಟ್ಟು, ಏಕತೆ ಇಂದು ಕಾಣುತ್ತಿಲ್ಲ ಎಂದು ಶಿವಸೇನೆ ಮುಖವಾಣಿ 'ಸಾಮ್ನಾ'ಕ್ಕೆ ನೀಡಿರುವ ಸಂದರ್ಶನದಲ್ಲಿ ಠಾಕ್ರೆ ತಿಳಿಸಿದ್ದಾರೆ.
ಅಂಬಾನಿಯಂತಹ ವ್ಯಕ್ತಿಗಳು ಮುಂಬೈಗೆ ಬಂದು ಉದ್ಯಮವನ್ನು ತೆರೆಯಬಹುದಾದರೆ, ನಮ್ಮ ಜನ ಯಾಕೆ ಹಿಂದೆ ಬಿದ್ದಿದ್ದಾರೆ ಎಂದು ಮರಾಠಿಗರನ್ನು ಉದ್ಯಮದತ್ತ ಹೊರಳುವಂತೆಯೂ ಅವರು ಕರೆ ನೀಡಿದ್ದಾರೆ.
ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ವ್ಯಕ್ತಿಗಳು ಜನತೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದವರು. ಅಂತಹ ವ್ಯಕ್ತಿಗಳು ಯಾವತ್ತೂ ರಾಜಕೀಯದಿಂದ ಹೊರತಾದವರು ಎಂದು ಕೂಡ ಠಾಕ್ರೆ ಸಂದರ್ಶನದಲ್ಲಿ ಹೇಳಿದ್ದಾರೆ.
ಆ ಮೂಲಕ ಇತ್ತೀಚೆಗಷ್ಟೇ ಮುಂಬೈ ಕುರಿತು ತೆಂಡೂಲ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಠಾಕ್ರೆ ಇದೀಗ ತನ್ನ ಮಾತಿನ ವರಸೆ ಬದಲಾಯಿಸಿರುವುದು ಸ್ಪಷ್ಟವಾಗಿದೆ.