ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿ ನಿಷೇಧ ಮುಂದುವರಿಸಲು ಶಿಫಾರಸು: ರೆಡ್ಡಿಗಳಿಗೆ ಹಿನ್ನಡೆ
(Mining | Reddy brothers | Karnataka | Survey of India panel)
ಗಣಿ ನಿಷೇಧ ಮುಂದುವರಿಸಲು ಶಿಫಾರಸು: ರೆಡ್ಡಿಗಳಿಗೆ ಹಿನ್ನಡೆ
ನವದೆಹಲಿ, ಗುರುವಾರ, 29 ಏಪ್ರಿಲ್ 2010( 19:04 IST )
ಬಳ್ಳಾರಿ ಗಣಿಗಾರಿಕೆ ಪ್ರದೇಶದ ಗಡಿ ನಕ್ಷೆಯಲ್ಲಿ ದೋಷವಿದ್ದು, ಆಂಧ್ರಪ್ರದೇಶ ಮತ್ತು ಕರ್ನಾಟಕ ನಡುವಿನ ಗಡಿಯನ್ನು ಮತ್ತೆ ಹೊಸದಾಗಿ ಗುರುತಿಸಬೇಕು; ಗಡಿ ಗುರುತಿಸುವಿಕೆ ಕಾರ್ಯ ಮುಗಿಯುವವರೆಗೆ ಓಬಳಾಪುರಂ ಗಣಿಗಾರಿಕೆ ಮೇಲೆ ಹೇರಿರುವ ನಿಷೇಧವನ್ನು ಮುಂದುವರಿಸಬೇಕು ಎಂದು ಸರ್ವೇ ಆಫ್ ಇಂಡಿಯಾ ಸರ್ವೋಚ್ಚ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ. ಇದರೊಂದಿಗೆ ಕರ್ನಾಟಕದ ಸಚಿವದ್ವಯರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಗಣಿ ಗುತ್ತಿಗೆ ಪ್ರದೇಶದ ನಕಾಶೆಯಲ್ಲಿ ಹಲವು ಲೋಪದೋಷಗಳಿದ್ದು, ಗಡಿ ಪುನರ್ ಪರಿಶೀಲನೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸರ್ವೇ ಆಫ್ ಇಂಡಿಯಾ ಸಮಿತಿಯು ತನ್ನ ವರದಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ. ಈ ವರದಿಯನ್ನು ಇಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದು, ನಾಳೆ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರ ಗೃಹ ಇಲಾಖೆ ಉಸ್ತುವಾರಿಯಲ್ಲಿ ಅಂತಾರಾಜ್ಯ ಗಡಿ ಗುರುತಿಸುವಿಕೆಯ ಕಾರ್ಯ ನಡೆಯಬೇಕು. ಬಳ್ಳಾರಿ ರಕ್ಷಿತಾರಣ್ಯ ಪ್ರದೇಶದ ಗಡಿ ಗುರುತಿಸುವಿಕೆ ನಡೆಸುವ ಅಗತ್ಯವೂ ಇದೆ. ಅಷ್ಟರವರೆಗೆ ಕರ್ನಾಟಕದ ಸಚಿವದ್ವಯರ ಮಾಲಕತ್ವದ ಒಎಂಸಿ ಗಣಿಗಾರಿಕೆ ನಡೆಸಬಾರದು ಎಂದು ಸರ್ವೇ ಆಫ್ ಇಂಡಿಯಾ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಆಂಧ್ರಪ್ರದೇಶ ಸರಕಾರದ ಎರಡು ಇಲಾಖೆಗಳು ಗಣಿ ನಡೆಯುತ್ತಿರುವ ಪ್ರದೇಶಗಳ ಕುರಿತು ಭಿನ್ನ ನಕ್ಷೆಗಳನ್ನು ನೀಡಿವೆ. ಹಾಗಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವಿನ ಗಡಿಯನ್ನು ಮರು ಸರ್ವೆ ನಡೆಸುವ ಅಗತ್ಯವಿದೆ. ಭವಿಷ್ಯದಲ್ಲಿ ಈ ಕುರಿತು ವಿವಾದ ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಗಣಿ ಮಾಲಿಕರಿಗೆ ಅಕ್ಷಾಂಶ-ರೇಖಾಂಶ ವಿವರಗಳನ್ನು ನೀಡಬೇಕು ಎಂಬ ಅಂಶಗಳು ಸೇರಿದಂತೆ ಹಲವು ಶಿಫಾರಸುಗಳನ್ನು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಸರ್ವೇ ಆಫ್ ಇಂಡಿಯಾ ಮಾಡಿರುವ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿ ಆದೇಶ ನೀಡಿದಲ್ಲಿ, ಎರಡು ರಾಜ್ಯಗಳ ನಡುವಿನ ಅಂತಾರಾಜ್ಯ ಗಡಿ ಮರು ಸರ್ವೇ ನಡೆಯದ ಹೊರತು ರೆಡ್ಡಿ ಸಹೋದರರು ಗಣಿಗಾರಿಕೆ ನಡೆಸುವುದು ಸಾಧ್ಯವಿಲ್ಲ. ಪರಿಣಾಮ ರೆಡ್ಡಿಗಳು ಭಾರೀ ನಷ್ಟವನ್ನು ಅನುಭವಿಸಲಿದ್ದಾರೆ. ಹೊಸದಾಗಿ ಮತ್ತೆ ಗಡಿ ಗುರುತಿಸುವಿಕೆ ನಡೆಯಬೇಕೆಂದರೆ ಅದು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳಲಿದೆ.
ಈ ಪ್ರದೇಶದಲ್ಲಿ ರೆಡ್ಡಿ ಸಹೋದರರು ಮತ್ತು ಇತರರಿಂದ ಅತಿಕ್ರಮಣ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಸರ್ವೇ ಆಫ್ ಇಂಡಿಯಾದ ಸಮಿತಿಯನ್ನು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಈ ಹಿಂದೆ ಮಧ್ಯಂತರ ವರದಿ ಸಲ್ಲಿಸಿದ್ದ ಸಮಿತಿಯು, ಇಂದು ತನ್ನ ಪೂರ್ಣ ವರದಿಯನ್ನು ಸಲ್ಲಿಸಿದೆ.
ಸರ್ವೇ ಆಫ್ ಇಂಡಿಯಾವು ಆರು ಗಣಿಗಳ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಮೂರು ಗಣಿಗಳು ರೆಡ್ಡಿ ಸಹೋದರರಿಗೆ (ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ) ಸೇರಿದವು.