ಮೂರು ವರ್ಷಗಳ ಹಿಂದಿನ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಸ್ತಾನ ಉಗ್ರ ನಿಗ್ರಹ ದಳವು (ಎಟಿಎಸ್) ಹಿಂದೂ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ದೇವೇಂದ್ರ ಗುಪ್ತಾ ಎಂಬ ವ್ಯಕ್ತಿಯನ್ನು ಬಂಧಿಸಿದೆ.
ಕಳೆದ ಆರು ತಿಂಗಳಿಂದ ದೇವೇಂದ್ರನ ಚಲನವಲನಗಳನ್ನು ಎಟಿಎಸ್ ಕೂಲಂಕಷವಾಗಿ ಪರಿಶೀಲನೆಯಲ್ಲಿಟ್ಟಿತ್ತು. 2007ರ ಅಕ್ಟೋಬರ್ 11ರಂದು ಇಬ್ಬರ ಸಾವಿಗೆ ಕಾರಣವಾದ ಈ ಬಾಂಬ್ ಸ್ಫೋಟಕ್ಕೆ ಬಳಸಲಾದ ಮೊಬೈಲ್ ಹ್ಯಾಂಡ್‌ಸೆಟ್‌ಗೆ ಸಿಮ್ ಕಾರ್ಡ್‌ಗಳನ್ನು ಈತ ಖರೀದಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
WD
ಈತನನ್ನು ಅಜ್ಮೀರ್‌ನ ಬಿಹಾರಿಗಂಜ್ ಪ್ರದೇಶದಿಂದ ಗುರುವಾರ ಸೆರೆ ಹಿಡಿಯಲಾಗಿದೆ. ಸಿಮ್ ಕಾರ್ಡ್ ಖರೀದಿಯಲ್ಲಿ ಈತನ ಪಾತ್ರವಿದೆ ಎಂದು ಪೊಲೀಸರು ಹೇಳುತ್ತಿದ್ದು, ಸಿಮ್‌ಗಳು ಜಾರ್ಖಂಡ್‌ಗೆ ಸೇರಿದ್ದು ಎಂಬುದನ್ನು ಮೊದಲೇ ಪತ್ತೆ ಹಚ್ಚಿದ್ದರು.
ಅಜ್ಮೀರ್ ಸ್ಫೋಟದಲ್ಲಿ ಹಿಂದೂ ಬಲಪಂಥೀಯ ಸಂಘಟನೆ 'ಅಭಿನವ್ ಭಾರತ್' ಕೈವಾಡವಿದೆ ಎಂದು ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ರಾಜಸ್ತಾನ ಉಗ್ರ ನಿಗ್ರಹ ದಳ ಹೇಳಿತ್ತು. ಆದರೆ ಇದುವರೆಗೂ ಈ ಸಂಬಂಧ ಯಾರನ್ನೂ ಬಂಧಿಸಿರಲಿಲ್ಲ.
ಈ ಸಂಬಂಧ ರಾಜಸ್ತಾನ ಪೊಲೀಸರ ತಂಡವೊಂದು ಮುಂಬೈಗೆ ಭೇಟಿ ನೀಡಿ, ಮಾಲೆಂಗಾವ್ ಸ್ಫೋಟ ಆರೋಪಿಗಳಾದ ಲೆಫ್ಟಿನೆಂಟ್ ಕರ್ನಲ್ ಎಸ್.ಪಿ. ಪುರೋಹಿತ್ ಮತ್ತು ಇತರರ ನಾರ್ಕೊ-ಅನಾಲಿಸಿಸ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಿ ವರದಿಗಳನ್ನು ತಂದಿದ್ದರು.
ಅದರ ಪ್ರಕಾರ ಮಾಲೆಗಾಂವ್ ಸ್ಫೋಟದ ಆರೋಪಿಗಳಲ್ಲೊಬ್ಬನಾದ ದಯಾನಂದ್ ಪಾಂಡೆ ಎಂಬಾತ ಅಜ್ಮೀರ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬುದು ತಿಳಿದು ಬಂದಿದೆ. ಹಾಗಾಗಿ ಮಾಲೆಗಾಂವ್ ಸ್ಫೋಟ ಆರೋಪಗಳನ್ನು ಹೊತ್ತಿರುವ 'ಅಭಿನವ್ ಭಾರತ್' ಸಂಘಟನೆಯ ಮೇಲೆ ನಾವು ಕಣ್ಣಿಟ್ಟಿದ್ದೇವೆ ಎಂದು ರಾಜಸ್ತಾನ ಎಟಿಎಸ್ ಮುಖ್ಯಸ್ಥ ಕಪಿಲ್ ಗಾರ್ಗ್ ತಿಳಿಸಿದ್ದರು.