ಆಕೆಗೆ ಮದುವೆ ಏನೆಂದು ಅರ್ಥವಾಗುವ ಮೊದಲೇ ಹೆತ್ತವರ ಒತ್ತಾಯದಿಂದ ನಡೆದು ಹೋಗಿತ್ತು. ಆದರೂ ತಾನು ವಿದ್ಯಾಭ್ಯಾಸ ಮುಂದುವರಿಸಬೇಕು ಎಂಬ ಉತ್ಕಟೇಚ್ಛೆಯನ್ನು ವ್ಯಕ್ತಪಡಿಸಿ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದಳು. ಈಗ ತನ್ನ 17ನೇ ವಯಸ್ಸಿನಲ್ಲಿ ಆ ಮದುವೆಯನ್ನು ರದ್ದು ಪಡಿಸಿಕೊಂಡಿದ್ದಾಳೆ. ಮುಂದಕ್ಕೆ ಏನೋ ದೊಡ್ಡ ಅಧಿಕಾರಿಯಾಗಬೇಕೆನ್ನುವುದು ಅವಳ ಆಸೆ.
ಇದು ನಡೆದಿರುವುದು ನಮ್ಮ ದೇಶದಲ್ಲೇ ಮತ್ತು ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಹಾಗೆ ನಡೆಯುವುದು ಎಷ್ಟು ಕಠಿಣ ಕೆಲಸ ಹಾಗೂ ಅದಕ್ಕಾಗಿ ಎಷ್ಟೊಂದು ಟೀಕೆಗಳನ್ನು ಎದುರಿಸಬೇಕಾಗುತ್ತದೆ; ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಬಹುತೇಕ ಎಲ್ಲರಿಗೂ ಒಂದಲ್ಲ ಒಂದು ಸಲ ನೋಡಿಯೋ, ಕೇಳಿಯೋ ಅಥವಾ ಸ್ವತಃ ಅನುಭವಿಸಿಯೋ ಅರಿವಿಗೆ ಬಂದಿರುತ್ತದೆ.
PR
17ರ ಹರೆಯದ ಈ ದಿಟ್ಟ ಬಾಲೆಯ ಹೆಸರು ರೇಣು ಯಾದವ್. ಹರ್ಯಾಣದ ರೆವಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು. ಮದುವೆ ನಡೆಯುವಾಗ ಆಕೆಗೆ ಕೇವಲ 13 ವರ್ಷ. ಅಂದರೆ ಒಂಬತ್ತನೇ ತರಗತಿಯಲ್ಲಿದ್ದಳು.
ಹೆತ್ತವರ ಬಲವಂತದಿಂದಲೇ ವ್ಯಕ್ತಿಯೊಬ್ಬನಿಗೆ ಹೆಂಡತಿಯಾದ ಬಾಲಕಿ ರೇಣು ಮದುವೆಯ ನಂತರ ಗಂಡನ ಜತೆ ಹೋಗಲು ನಿರಾಕರಿಸಿದ್ದಳು. ಯಾವುದೇ ಕಾರಣಕ್ಕೂ ನಾನೂ ಹೋಗಲ್ಲ ಎಂದು ಹಠ ಹಿಡಿದ ಆಕೆ, ನಾನು ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಹೆತ್ತವರಿಗೆ ದುಂಬಾಲು ಬಿದ್ದಿದ್ದಳು.
ನನಗೆ ಆಗ ಮದುವೆ ಎಂದರೆ ಏನೆಂದೇ ಗೊತ್ತಿರಲಿಲ್ಲ. ವರನ ಹೆತ್ತವರು ನನ್ನ ತಂದೆಯ ಮೇಲೆ ಒತ್ತಡ ಹೇರಿದ ಹೊರತಾಗಿಯೂ ನಾನು ಅವರ ಜತೆ ಹೋಗಲು ನಿರಾಕರಿಸಿದ್ದೆ. ನನ್ನ ನಿಲುವನ್ನು ಬದಲಾಯಿಸದೆ, ವಿದ್ಯಾಭ್ಯಾಸದ ಆಸೆಯನ್ನು ತೋಡಿಕೊಂಡಿದ್ದೆ ಎಂದು ಇದೀಗ ಮದುವೆ ರದ್ದು ಮಾಡಿಸಿಕೊಂಡಿರುವ ರೇಣು ಹೇಳುತ್ತಾಳೆ.
ಈಗ ರೇಣುವಿನ ತಂದೆ ಅಂದಿನ ದಿನಗಳನ್ನು ಮರು ನೆನಪಿಸಿಕೊಳ್ಳುತ್ತಾರೆ. ನನ್ನ ಮಗಳು ನಮ್ಮ ಮೇಲೆ ಭಾರೀ ಒತ್ತಡವನ್ನು ಹೇರಿದ್ದಳು. ವಿದ್ಯಾಭ್ಯಾಸ ಮುಂದುವರಿಸಿ, ನೌಕರಿಯೊಂದನ್ನು ಹಿಡಿಯಬೇಕು ಎನ್ನುವುದು ಅವಳ ಬಯಕೆಯಾಗಿತ್ತು. ಪೊಲೀಸ್ ಪಡೆ ಸೇರುವುದು ಅಥವಾ ಶಿಕ್ಷಕಿಯಾಗುವುದು ಅವಳ ಆಸೆ ಎನ್ನುತ್ತಾರೆ.
ಮದುವೆಯನ್ನು ರದ್ದುಗೊಳಿಸಬೇಕು ಎಂದು ಇದೇ ವರ್ಷದ ಆರಂಭದಲ್ಲಿ ಹರ್ಯಾಣ ಹೈಕೋರ್ಟ್‌ನಲ್ಲಿ ರೇಣು ಅರ್ಜಿ ಸಲ್ಲಿಸಿದ್ದಳು. ಇದಕ್ಕೆ ಪೂರಕವಾಗಿ ಸೋಮವಾರ ನ್ಯಾಯಾಲಯವು ಬಾಲ್ಯವಿವಾಹವನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿದೆ.