ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆಗೆ ರಾಷ್ಟ್ರೀಯ ಜನತಾದಳದ 'ಗುಂಡು' ಪ್ರತಿಭಟನೆ! (RJD | price rise protest | beer | Lalu Prasad Yadav)
Bookmark and Share Feedback Print
 
ಬೆಲೆಯೇರಿಕೆಯನ್ನು ನಿಯಂತ್ರಿಸದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಕೆಲವು ಪಕ್ಷಗಳು ಮೊನ್ನೆ ಇದ್ದಕ್ಕಿದ್ದಂತೆ ಪ್ರತಿಭಟನೆ, ಬಂದ್ ನಡೆಸಿರುವುದು ಗೊತ್ತೇ ಇದೆ. ಆದರೆ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿಯರ್ ಕುಡಿದು, ಕುಣಿದು, ಕುಪ್ಪಳಿಸಿ ವಿಶಿಷ್ಟ ಪ್ರತಿಭಟನೆಯೆಂದು ಕರೆಸಿಕೊಂಡು ಇದೀಗ ಕೇಸು ಹಾಕಿಸಿಕೊಂಡಿದೆ.
ಲಾಲೂ ಪಕ್ಷದ ಬಿಯರ್ ಪ್ರತಿಭಟನೆಯಿದು..
PR


ಇದು ನಡೆದಿರುವುದು ಲಾಲೂ ತವರು ಬಿಹಾರದ ಪಾಟ್ನಾದಲ್ಲಿ. ಮನೇರ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀಕಾಂತ್ ನಿರಾಲಾ ಮುಂದಾಳುತ್ವದಲ್ಲಿ ಈ 'ಗುಂಡು' ಪ್ರತಿಭಟನೆ ನಡೆದಿತ್ತು. ಹೇಗೂ ತನ್ನ ಪಕ್ಷದ ವರಿಷ್ಠ 12 ಗಂಟೆಗಳ ಭಾರತ ಬಂದ್‌ಗೆ ಕರೆ ನೀಡಿದ್ದನ್ನೇ ಮುಂದಿಟ್ಟುಕೊಂಡ ಈ ಗುಂಪು ತನ್ನ ಕಾರ್ಯಕರ್ತರಿಗೆ ಬಿಯರ್ ಪೂರೈಸಿ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದೆ.

ಮಂಗಳವಾರ ನಡೆದಿದ್ದ ಈ ಬಂದ್ ಸಂದರ್ಭದಲ್ಲಿ ಆರ್‌ಜೆಡಿ ಕಾರ್ಯಕರ್ತರೊಂದಿಗಿದ್ದ ಈ ಶಾಸಕ ತುಂಬಾ ಹೊತ್ತು ಬಿಸಿಲು ಮತ್ತು ಬೆಲೆಯೇರಿಕೆಯ ತೀವ್ರತೆಯನ್ನು ತಡೆದುಕೊಳ್ಳಲಾಗದೆ ಐದು ಬಾಕ್ಸ್ ಬಿಯರ್ ತರಿಸಿದ್ದರು. ಅದನ್ನು ತನ್ನ ಬೆಂಬಲಿಗರಿಗೆ ಕುಡಿಸಿ, ಮೈಮೇಲೆ ಸುರಿದು ಪ್ರತಿಭಟನಾ ಕಾರ್ಯಕ್ರಮದಲ್ಲಿ ಸಂಭ್ರಮಾಚರಣೆ ನಡೆಸಿದ್ದರು.

ಸುಮಾರು ಹೊತ್ತು ನಡೆದ ಈ ಘಟನೆಯನ್ನು ಸ್ಥಳೀಯ ಟಿವಿ ಚಾನೆಲ್ ಒಂದು ರೆಕಾರ್ಡ್ ಮಾಡಿಕೊಂಡು ಪ್ರಸಾರ ಮಾಡಿತ್ತು. ಅದರಲ್ಲಿ ಆರ್‌ಜೆಡಿ ಕಾರ್ಯಕರ್ತರು ಬಿಯರ್ ಕುಡಿಯುತ್ತಿರುವುದು, ಮೈಮೇಲೆ ಸುರಿದುಕೊಳ್ಳುತ್ತಿರುವುದು, ಬಾಟ್ಲಿಗಳನ್ನು ಗಾಳಿಯಲ್ಲಿ ಹಾರಿಸುತ್ತಿರುವುದು ದಾಖಲಾಗಿತ್ತು. ಶಾಸಕ ನಿರಾಳ್ ಪಕ್ಕದಲ್ಲೇ ಇದ್ದ ಮರದಡಿಯಲ್ಲಿ ಕುಳಿತಿರುವುದನ್ನೂ ಈ ವೀಡಿಯೋ ತುಣುಕು ತೋರಿಸಿತ್ತು.

ಆದರೆ ಇದನ್ನು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಇದು ಸ್ಥಳೀಯ ಜಮಾತ್‌ನಲ್ಲಿ (ಸಮುದಾಯ) ಹಲವು ರೀತಿಯ ಜನರಿದ್ದಾರೆ. ಕುಡಿಯುವುದು ಅವರ ಜೀವನದ ಹಾದಿ ಎಂದು ಅವರು ತಿಳಿಸಿದ್ದಾರೆ.

ಆದರೆ ಇದರಿಂದ ಆರ್‌ಜೆಡಿ ತೀವ್ರ ಮುಖಭಂಗ ಅನುಭವಿಸಿದ್ದು, ರಾಜ್ಯಾಧ್ಯಕ್ಷ ಎ.ಬಿ. ಸಿದ್ಧಿಕಿ ಶೋಕಾಸ್ ನೊಟೀಸ್ ಜಾರಿಗೊಳಿಸಿದ್ದಾರೆ. ಬೆನ್ನಿಗೆ ಶಾಸಕ ಮತ್ತು ಕಾರ್ಯಕರ್ತರ ವರ್ತನೆ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೇ ಹೊತ್ತಿಗೆ ಬಿಹಾರದಲ್ಲಿ ಗಲ್ಲಿಗಲ್ಲಿಗಳಲ್ಲಿ ಲಭ್ಯವಾಗುತ್ತಿರುವ ಮದ್ಯದ ಕುರಿತೂ ಆರ್‌ಜೆಡಿ ವರಿಷ್ಠರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ಇಂತಹ ನಿಯಮಗಳನ್ನು ಜಾರಿಗೆ ತರುವ ಮೂಲಕ ಜನತೆಯ ಹಾದಿ ತಪ್ಪಿಸುತ್ತಿದೆ ಎಂದು ಸಿದ್ಧಿಕಿಯವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ