ಸಾಕಷ್ಟು ರಾಜಕೀಯ ಬೆಳವಣಿಗೆಗಳ ನಂತರ ಶಿಬು ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಛಾ ಪಕ್ಷದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳುವ ನಿರ್ಧಾರವನ್ನು ಬಿಜೆಪಿ ಮುಂದಕ್ಕೆ ಹಾಕಿದ್ದು, ಸರಕಾರ ರಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದೆ.
ಯುಪಿಎ ಸರಕಾರದ ವಿರುದ್ಧ ಬಿಜೆಪಿ ಖಂಡನಾ ನಿರ್ಣಯ ಮಂಡಿಸಿದ್ದ ಸಂದರ್ಭದಲ್ಲಿ ಜೆಎಂಎಂ ಕೇಂದ್ರದ ಪರ ಮತ ಚಲಾಯಿಸಿದ್ದನ್ನೇ ಮುಂದಿಟ್ಟುಕೊಂಡಿದ್ದ ಬಿಜೆಪಿ, ಜಾರ್ಖಂಡ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಹೇಳಿತ್ತು.
ಆದರೆ ನಂತರ ಅದು ತನ್ನಿಂದಾದ ಕಣ್ತಪ್ಪು ಎಂದು ಸ್ವತಃ ಮುಖ್ಯಮಂತ್ರಿ ಶಿಬು ಸೊರೆನ್ ಅವರು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದು, ಕ್ಷಮೆ ಯಾಚಿಸಿದ್ದಾರೆ.
ಇದರ ಬೆನ್ನಿಗೆ ಸೊರೆನ್ ಪುತ್ರ ಹೇಮಂತ್ ಸೊರೆನ್, ಬಿಜೆಪಿ ಸರಕಾರ ರಚಿಸುವುದಾದರೆ ಜೆಎಂಎಂ ಬೆಂಬಲ ನೀಡುತ್ತದೆ. ನನ್ನ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ನಿಮ್ಮದೇ ಪಕ್ಷದ ಮುಖಂಡನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ನೂತನ ಸೂತ್ರವೊಂದನ್ನು ಮುಂದಿಟ್ಟಿದ್ದಾರೆ.
ಇದೇ ನಿಟ್ಟಿನಲ್ಲಿ ಬಿಜೆಪಿ ಚಿಂತನೆ ನಡೆಸುತ್ತಿದ್ದು, ಯಶವಂತ್ ಸಿನ್ಹಾ ಅಥವಾ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರಿಗೆ ಸಿಎಂ ಗಾದಿ ನೀಡುವ ಯೋಚನೆಯಲ್ಲಿದೆ. ಮುಂಡಾ ಈಗಾಗಲೇ ಪಕ್ಷದ ವಲಯದಲ್ಲಿ ಒತ್ತಡ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡರೆ, ಉಪ ಮುಖ್ಯಮಂತ್ರಿ ಸ್ಥಾನ ಹೇಮಂತ್ ಸೊರೆನ್ ವಹಿಸಿಕೊಳ್ಳುತ್ತಾರೆ. ಇದಕ್ಕೆ ಜೆಎಂಎಂ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಾರ್ಖಂಡ್ ಸರಕಾರದಿಂದ ಬೆಂಬಲ ಹಿಂದಕ್ಕೆ ಪಡೆದುಕೊಳ್ಳುವ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಲು ನಿಗದಿ ಪಡಿಸಲಾಗಿದ್ದ ಸಮಯವನ್ನು ಎರಡೆರಡು ಬಾರಿ ರದ್ದುಪಡಿಸಲಾಗಿದೆ.
ಪಕ್ಷದ ನಡೆಯನ್ನು ನಿರ್ಧರಿಸುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಪಕ್ಷದ ಸಂಸದೀಯ ಮಂಡಳಿಯು ಸಭೆ ಸೇರಿತ್ತು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಅನಂತ್ ಕುಮಾರ್, ಜಾರ್ಖಂಡ್‌ನಲ್ಲಿ ಮೈತ್ರಿ ಸರಕಾರ ರಚನೆ ಸಂಬಂಧ ನಾವು ಜೆಎಂಎಂ ಜತೆ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅದೇ ಹೊತ್ತಿಗೆ ಜೆಎಂಎಂ ಸರಕಾರಕ್ಕೆ ಬೆಂಬಲ ನೀಡಿದ್ದ ಜಾರ್ಖಂಡ್ ಜನಾಧಿಕಾರ್ ಮಂಚ್ (ಜೆಜೆಎಂ) ಪಕ್ಷ ಏಕೈಕ ಶಾಸಕ ಬಂಧು ಟಿರ್ಕೆ ಎಂಬವರು ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದಾದರೆ ನಾನು ಬೆಂಬಲ ನೀಡಲ್ಲ ಎಂದು ಹೇಳಿದ್ದಾರೆ.
ನಾನು ಶಿಬು ಸೊರೆನ್ ಅವರನ್ನು ಬೆಂಬಲಿಸುತ್ತಿದ್ದೇನೆಯೇ ಹೊರತು ಬಿಜೆಪಿಯನ್ನಲ್ಲ. ಖಂಡಿತಾ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ನಾನು ಬೆಂಬಲ ನೀಡುವುದಿಲ್ಲ ಎಂದು ಟಿರ್ಕೆ ಸ್ಪಷ್ಟಪಡಿಸಿದ್ದಾರೆ.