ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹರ್ಯಾಣದಲ್ಲಿ ಕಾಲ್ತುಳಿತಕ್ಕೆ ಐವರು ಮಹಿಳಾ ಭಕ್ತರು ಬಲಿ (stampede | Dera Sacha Sauda | Haryana | Gurmit Ram Rahim Singh)
ಹರ್ಯಾಣಾ ನಗರದ ಸಮೀಪವಿರುವ ದೇರಾ ಸಚ್ಚಾ ಸೌದಾ ಕೇಂದ್ರದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಕಾಲ್ತುಳಿತಕ್ಕೆ ಕನಿಷ್ಠ ಐವರು ಮಹಿಳಾ ಭಕ್ತರು ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ಚಂಡೀಗಢದಿಂದ 300 ಕಿ.ಮೀ. ದೂರದಲ್ಲಿರುವ ಸಿರ್ಸಾದಲ್ಲಿನ ದೇರಾ ಸಚ್ಚಾ ಸೌದದಲ್ಲಿ ಬೆಳಗ್ಗಿನ ಜಾವ ಎರಡು ಗಂಟೆ ಹೊತ್ತಿಗೆ ಪ್ರಾರ್ಥನೆ ಮುಕ್ತಾಯಗೊಂಡ ನಂತರ ಧರ್ಮಗುರು ಗುರ್ಮಿತ್ ರಾಮ್ ರಹೀಂ ಸಿಂಗ್ ಗಿಫ್ಟ್‌ಗಳನ್ನು ವಿತರಿಸುವ ವೇಳೆ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರದ್ಧಾಳುಗಳ ನಡುವೆಯಿಂದ ಕೇಳಿಬಂದ ಭಾರೀ ಕೂಗಾಟದಲ್ಲಿ ಹಿನ್ನಲೆಯಲ್ಲಿ ಭಯಭೀತರಾಗಿ ಜನರು ದಿಕ್ಕೆಟ್ಟು ಓಡತೊಡಗಿದರು. ಇದರಿಂದಾಗಿ ನೂಕು ನುಗ್ಗಲು ಉಂಟಾಗಿತ್ತು. ದೇರಾ ಸಚ್ಚಾ ಸೌದ ಸಂಸ್ಥಾಪಕರ ದಿನವನ್ನಾಚರಿಸಲು ಹತ್ತಾರು ಸಾವಿರ ಭಕ್ತರು ಸ್ಥಳದಲ್ಲಿ ಸೇರಿದ್ದರು.
ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಗುರುವಾರ ರಾತ್ರಿ ಪಂಥದ ಕೇಂದ್ರ ಪ್ರದೇಶದಲ್ಲಿ ಜಮಾಯಿಸಿದ್ದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಇದೀಗ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.