ಇತ್ತೀಚೆಗಷ್ಟೇ 11 ದಿನದ ಹಸುಗೂಸನ್ನು ಬಲಿ ತೆಗೆದುಕೊಂಡಿದ್ದ ಪ್ರತ್ಯೇಕವಾದಿ ಗುಂಪಿನ ಪ್ರತಿಭಟನಾಕಾರರು ಇದೀಗ ಶ್ರೀನಗರದ ಬಾಟ್ಮಲೂ ಪ್ರದೇಶದಲ್ಲಿ ಕಲ್ಲೆಸೆದು ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ್ದಾರೆ. ಇಂದು ಬೆಳಿಗ್ಗೆ ಈ ಹೃದಯ ವಿದ್ರಾಯಕ ಘಟನೆ ನಡೆದಿದೆ.
40ರ ಹರೆಯದ ಶಫೀಕ್ ಅಹ್ಮದ್ ಶೇಖ್ ಪ್ರತಿಭಟನಾಕಾರರ ಅಟ್ಟಹಾಸಕ್ಕೆ ಬಲಿಯಾದ ವ್ಯಕ್ತಿ. ನಾಟಿಪೋರಾದಿಂದ ಬಾಟ್ಮಲೂಗೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ಗುಂಪೊಂದು ಕಲ್ಲೆಸೆದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಸೌರಾದಲ್ಲಿರುವ ಎಸ್.ಕೆ. ವೈದ್ಯಕೀಯ ಕಾಲೇಜಿಗೆ ದಾಖಲಿಸಿದರೂ ಆ ವೇಳೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಲು ಯತ್ನಿಸುತ್ತಿದ್ದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದರು. ಹುರಿಯತ್ ಕಾನ್ಫೆರನ್ಸ್ ಮುಖಂಡ ಸೈಯದ್ ಆಲಿ ಷಾ ಗಿಲಾನಿ ಗೃಹ ಬಂಧನವನ್ನು ವಿರೋಧಿಸಿ ಪ್ರತ್ಯೇಕವಾದಿ ಗುಂಪುಗಳು ಹಿಂಸಾಚಾರ ನಡೆಸುತ್ತಿದೆ.
ಆದರೆ ಈ ತನಕ ದಾಳಿ ಮಾಡಿದವರ ಬಂಧನ ನಡೆದಿಲ್ಲ.
ಅದೇ ವೇಳೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯನ್ನು ಖಂಡಿಸಲೇಬೇಕು. ಪ್ರತ್ಯೇಕಾವಾದಿಗಳಿಗೆ ಏನೂ ಬೇಕಾದರೂ ಮಾಡುವಂತಾಗಿದೆ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
ಫೆಬ್ರವರಿ 22ರಂದು ಬಾರಾಮುಲ್ಲಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತ್ಯೇಕಾವಾದಿಗಳು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಕೈಯಿಂದ 11 ದಿನದ ಎಳೆ ಮಗು ಕೆಳಗೆ ಬಿದ್ದು ಸಾವಿಗೀಡಾಗಿತ್ತು.
ಅದೇ ವೇಳೆ ಪ್ರತಿಭಟನಕಾರರಿಗೆ ಪಾಕಿಸ್ತಾನ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ ಎಂದು ರಾಜ್ಯ ಸರಕಾರ ಆಪಾದಿಸಿದೆ.