ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರಿಗೆ ಅರೆ ಸೇನಾಪಡೆ ಸಿಬ್ಬಂದಿಗಳಿಂದಲೇ ಶಸ್ತ್ರಾಸ್ತ್ರ..! (CRPF men | Naxals | Vinod Paswan | Dinesh Singh)
Bookmark and Share Feedback Print
 
ಮಾವೋವಾದಿಗಳಿಗೆ ವಿದೇಶಗಳಿಂದ ಶಸ್ತ್ರಾಸ್ತ್ರಗಳು ಪೂರೈಕೆಯಾಗುತ್ತಿವೆ, ಅವರು ಎಲ್ಲಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಆಘಾತವನ್ನುಂಟು ಮಾಡುವ ಬೆಳವಣಿಗೆಯೊಂದು ವರದಿಯಾಗಿದೆ. ಸ್ವತಃ ಸಿಆರ್‌ಪಿಎಫ್ ಸಿಬ್ಬಂದಿಗಳೇ ನಕ್ಸಲರಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ದಂತೇವಾಡದಲ್ಲಿ ನಕ್ಸಲರಿಂದ ನಡೆದ 76 ಭದ್ರತಾ ಸಿಬ್ಬಂದಿಗಳ ಮಾರಣಹೋಮದ ನಂತರ ಸಿಕ್ಕಿದ ಸೂಕ್ಷ್ಮ ಮಾಹಿತಿಗಳ ಆಧಾರದ ಹಿನ್ನೆಲೆಯಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಇದು ಬೆಳಕಿಗೆ ಬಂತು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಒಟ್ಟು ನಾಲ್ವರನ್ನು ಬಂಧಿಸಲಾಗಿದ್ದು, ಅವರಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಗಳು. ಮೊರಾದಾಬಾದ್, ರಾಂಪುರ ಮತ್ತು ಝಾನ್ಸಿ ಪ್ರದೇಶಗಳಲ್ಲಿ ಎಸ್‌ಟಿಎಫ್ ತೀವ್ರ ತಪಾಸಣೆ ನಡೆಸಿದ ನಂತರ ವಿನೋದ್ ಪಾಸ್ವಾನ್ ಮತ್ತು ದಿನೇಶ್ ಸಿಂಗ್ ಎಂಬ ಇಬ್ಬರು ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡಿದೆ.

ಯಶೋಧಾನಂದ್ ಸಿಂಗ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಸಿಆರ್‌ಪಿಎಫ್ ಮತ್ತು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಯ ಹಲವು ಕೇಂದ್ರಗಳ ಸುತ್ತ ತರಬೇತಿ ಸಂದರ್ಭದಲ್ಲಿ ಖಾಲಿಯಾಗುವ ತುಪಾಕಿಗಳ ಶೆಲ್‌ಗಳನ್ನು ಸಂಗ್ರಹಿಸುತ್ತಿದ್ದರು. ಇದೇ ಖಾಲಿ ಶೆಲ್‌ಗಳನ್ನು ನಂತರ ರಾಂಪುರದಲ್ಲಿನ ಶಸ್ತ್ರಾಗಾರದಲ್ಲಿ ಇಟ್ಟು, ಅಲ್ಲಿಂದ ಜೀವಂತ ತುಪಾಕಿಗಳನ್ನು ಕಳ್ಳತನದ ಮೂಲಕ ನಕ್ಸಲರಿಗೆ ಪೂರೈಸಲಾಗುತ್ತಿತ್ತು.

ಪೊಲೀಸರು ನಡೆಸಿದ ದಾಳಿಯ ಸಂದರ್ಭದಲ್ಲಿ 5,000ಕ್ಕೂ ಹೆಚ್ಚು ಜೀವಂತ ಸಿಡಿಮದ್ದು, 16 ಇನ್ಸಾಸ್ ರೈಫಲ್‌ಗಳ ಮದ್ದುಗುಂಡುಗಳು, .25 ಬೋರ್ ಗನ್‌ಗಳು, ಎಸ್‌ಎಲ್ಆರ್, ಎಕೆ47ಗಳು ಮತ್ತು 245 ಕೆಜಿ ಖಾಲಿ ಶೆಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಾಕಷ್ಟು ಶಸ್ತ್ರಾಸ್ತ್ರ, ಸ್ಫೋಟಕಗಳು, ಮೊಬೈಲ್ ಫೋನ್‌ಗಳು ಮತ್ತು 1.76 ಲಕ್ಷ ರೂಪಾಯಿ ನಗದು ಹಣವನ್ನು ಕೂಡ ನಾವು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಬ್ರಿಜ್ ಲಾಲ್ ತಿಳಿಸಿದ್ದಾರೆ.

ಪ್ರಕರಣ ಬಯಲಿಗೆ ಬರುತ್ತಿದ್ದಂತೆ ತನ್ನ ಸಿಬ್ಬಂದಿಗಳನ್ನು ಸಿಆರ್‌ಪಿಎಫ್ ಅಮಾನತುಗೊಳಿಸಿದ್ದು, ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ