ತೀವ್ರ ವಿವಾದಕ್ಕೀಡಾಗಿ ಅಮಾನತುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಕಮೀಷನರ್ ಲಲಿತ್ ಮೋದಿ ಭೂಗತ ದೊರೆ ದಾವೂದ್ ಇಬ್ರಾಹಿಂ ಹಿಟ್‌ಲಿಸ್ಟ್‌ನಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫ್ರಾಂಚೈಸಿ ವಿವಾದದ ಹಿನ್ನೆಲೆಯಲ್ಲಿ ಲಲಿತ್ ಮೋದಿಯನ್ನು ಹತ್ಯೆ ಮಾಡುವಂತೆ ಭೂಗತ ಪಾತಕಿ ದಾವೂದ್ ತನ್ನ ಬಂಟರನ್ನು ಬಿಟ್ಟಿದ್ದು, ಬೆಂಗಳೂರು ಅಥವಾ ಮುಂಬೈನಲ್ಲಿ ಹತ್ಯೆ ಮಾಡುವಂತೆ ನಿರ್ದೇಶಿಸಿದ್ದ ಎಂದು ಮೂಲವೊಂದು ಹೇಳಿದೆ.
ಐಪಿಎಲ್ ಮೂರನೇ ಹಂತದ ಅವಧಿಯ ವೇಳೆ ಮೋದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಈ ಮಾಹಿತಿ ಅರಿತು ಮೋದಿ ಪ್ರತಿ ಬಾರಿ ಮುಂಬೈಗೆ ಭೇಟಿ ನೀಡುತ್ತಿದ್ದ ವೇಳೆ ಬಿಗಿ ಬಂದೋಬಸ್ತ್ ಮಾಡಲಾಗುತ್ತಿತ್ತು ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಆದರೂ ಲಲಿತ್ ಮೋದಿಯನ್ನು ಭೂಗತ ಪಾತಕಿ ದಾವೂದ್ ಕೊಲ್ಲುವ ಹಿಂದಿನ ಉದ್ದೇಶವಾದರೂ ಏನು ಎಂಬ ಬಗ್ಗೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.