2007ರಲ್ಲಿ ಸಂಭವಿಸಿದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮೂಲದ ಮತ್ತೋರ್ವ ಶಂಕಿತ ಆರೋಪಿಯನ್ನು ರಾಜಸ್ತಾನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸೆರೆ ಹಿಡಿದಿದೆ.
ಇಲ್ಲಿನ ಷಾಜಾಪುರ್ ಛಾಪ್ರಾ ಗ್ರಾಮದ ಚಂದ್ರಶೇಖರ್ ಬರೋತ್ ಎಂಬಾತನನ್ನು ಶುಕ್ರವಾರ ರಾತ್ರಿ ಎಟಿಎಸ್ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಸ್ಫೋಟ ಪ್ರಕರಣ ಕುರಿತಂತೆ ಹಿಂದೂ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ದೇವೇಂದ್ರ ಗುಪ್ತಾ ಎಂಬಾತನನ್ನು ಬಂಧಿಸಿದ್ದರು. ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬಂಧಿತ ಗುಪ್ತಾನಿಂದ ಸ್ಫೋಟಕ್ಕೆ ಬಳಸಲಾದ ಮೊಬೈಲ್ ಹ್ಯಾಂಡ್ ಸೆಟ್,ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ಇದೀಗ 2007ರ ಅಕ್ಟೋಬರ್ ತಿಂಗಳಿನಲ್ಲಿ ಅಜ್ಮೀರ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಸ್ಫೋಟ ಪ್ರಕರಣ ನಡೆದಿತ್ತು.
ಚಂದ್ರಶೇಖರ್ ಆರ್ಎಸ್ಎಸ್ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದು, ಹಲವಾರು ಹಿಂದೂ ಸಂಘಟನೆಯಲ್ಲಿಯೂ ತನ್ನ ತೊಡಗಿಸಿಕೊಂಡಿದ್ದ ಎಂದು ವಿವರಿಸಿರುವ ಅಧಿಕಾರಿಗಳು, ಆದರೆ ಈ ಎಲ್ಲಾ ಸಂಘಟನೆಗಳು ಸ್ಫೋಟದಲ್ಲಿ ಶಾಮೀಲಾಗಿವೆಯೇ ಇಲ್ಲವೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಾಗಿದೆ ಎಂದು ವಿವರಿಸಿದ್ದಾರೆ.
ಬಂಧಿತ ಗುಪ್ತಾ ಅಜ್ಮೀರ್ ಸ್ಫೋಟ ಕುರಿತಂತೆ ಸಾಕಷ್ಟು ಮಾಹಿತಿ ನೀಡಿದ್ದು, ಆ ನಿಟ್ಟಿನಲ್ಲಿ ಆರ್ಎಸ್ಎಸ್ ಶಾಮೀಲಾತಿ ಬಗ್ಗೆ ಪುರಾವೆ ಸಿಕ್ಕಿರುವುದಾಗಿ ರಾಜಸ್ತಾನ ಗೃಹ ಸಚಿವ ಶಾಂತಿ ಧಾರಿವಾಲ್ ತಿಳಿಸಿದ್ದಾರೆ. ಗುಪ್ತಾನನ್ನು ಶುಕ್ರವಾರ ಅಜ್ಮೀರ್ ಸಿಜೆಎಂ ಕೋರ್ಟ್‌ಗೆ ಹಾಜರುಪಡಿಸಿದ್ದು, 12ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅಲ್ಲದೇ ಅಜ್ಮೀರ್ ಸ್ಫೋಟದಲ್ಲಿ ಭಾಗಿಯಾಗಿರುವುದಾಗಿ ಗುಪ್ತಾ ಒಪ್ಪಿಕೊಂಡಿರುವುದಾಗಿಯೂ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಾ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಜೊತೆಯೂ ನಿಕಟ ಸಂಪರ್ಕ ಹೊಂದಿರುವ ಮಾಹಿತಿ ದೊರೆತಿದೆ ಎಂದು ಹೇಳಿದ್ದಾರೆ.