ಭಾರತಕ್ಕೆ ಸಂಬಂಧಪಟ್ಟ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಬಂಧಿತಳಾಗಿದ್ದ ಇಸ್ಲಾಮಾಬಾದ್‌ನಲ್ಲಿ ಭಾರತ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಧುರಿ ಗುಪ್ತಾಗೆ ದೆಹಲಿ ಕೋರ್ಟ್ ಶನಿವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬಂಧಿತ ದೇಶದ್ರೋಹಿ ಮಹಿಳಾ ಅಧಿಕಾರಿ ಮಾಧುರಿ ಗುಪ್ತಾ ಪಾಕಿಸ್ತಾನದ ರಾಜಧಾನಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಮಾಧ್ಯಮ ಮತ್ತು ಮಾಹಿತಿ ವಿಭಾಗದಲ್ಲಿ ಎರಡನೇ ಹಂತದ ಕಾರ್ಯದರ್ಶಿ ಹುದ್ದೆಯಲ್ಲಿದ್ದಳು.
ಈಕೆ ಭಾರತದ ರಹಸ್ಯ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಭಾರತದ ವಿದೇಶಾಂಗ ಇಲಾಖೆಯು, ಸಾರ್ಕ್ ಶೃಂಗಸಭೆಯ ಕುರಿತು ಮಾತುಕತೆ ನಡೆಸುವುದಿದೆ ಎಂಬ ಕಾರಣ ನೀಡಿ ಆಕೆಯನ್ನು ನಾಲ್ಕು ದಿನಗಳ ಹಿಂದೆಯೇ ನವದೆಹಲಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಬಂಧಿಸಿತ್ತು.
ಬಂಧನದ ನಂತರ ತೀವ್ರ ವಿಚಾರಣೆಗೆ ಗುರಿಪಡಿಸಿದ್ದ ಅಧಿಕಾರಿಗಳು ಇಂದು ಗುಪ್ತಾಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ದೆಹಲಿ ಕೋರ್ಟ್‌ನ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕಾವೇರಿ ಬಾವೇಜಾ ಅವರು ಮುಂದೆ ಹಾಜರುಪಡಿಸಿದ್ದರು.
ಈ ಸಂದರ್ಭದಲ್ಲಿ ದೆಹಲಿ ಪೊಲೀಸ್ ಸ್ಪೆಶಲ್ ಸೆಲ್ ಅಧಿಕಾರಿಗಳು ಮಾಧುರಿ ಗುಪ್ತಾಳ ವಿಚಾರಣೆಗಾಗಿ ಮತ್ತೆ ಎರಡು ದಿನಗಳ ಕಾಲಾವಧಿ ಕಸ್ಟಡಿ ವಿಸ್ತರಿಸಬೇಕೆಂದು ಕೋರ್ಟ್‌ಗೆ ಮನವಿ ಮಾಡಿಕೊಂಡರಾದರೂ ಕೂಡ, ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿ 14 ದಿನಗಳ ನ್ಯಾಯಾಂಗ ಬಂಧನ (ಮೇ 15) ವಿಧಿಸಿ ಆದೇಶ ನೀಡಿದೆ.