ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಗಲ್ಲುಶಿಕ್ಷೆಯಾಗಬಹುದೇ?; ನಾಳೆ ಅಂತಿಮ ತೀರ್ಪು
(Ajmal Kasab | Lashkar-e-Taiba | Faheem Ansari | Mumbai terror attacks)
ರಾಷ್ಟ್ರದ ವಾಣಿಜ್ಯ ರಾಜಧಾನಿಗೆ ನುಗ್ಗಿ ಎರ್ರಾಬಿರ್ರಿ ಗುಂಡಿನ ಮಳೆಗರೆದು ನೂರಾರು ಮಂದಿಯ ಸಾವಿಗೆ ಕಾರಣರಾದ ಪಾಕಿಸ್ತಾನದ ಆಗಂತುಕರಲ್ಲಿ ಬದುಕುಳಿದಿರುವ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ ಮತ್ತು ಇತರ ಇಬ್ಬರು ದೇಶೀಯ ಪಿತೂರಿದಾರರ ಹಣೆಬರಹ ಸೋಮವಾರ ನಿರ್ಧಾರವಾಗಲಿದೆ.
2008ರ ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಮುಗಿಸಿರುವ ವಿಶೇಷ ನ್ಯಾಯಾಲಯವು, ಸೋಮವಾರ ಕಸಬ್ ಮತ್ತು ಇತರ ಇಬ್ಬರು ಭಾರತೀಯ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾಬುದ್ದೀನ್ ಅಹ್ಮದ್ ಅವರ ಕುರಿತು ಮಹತ್ವದ ತೀರ್ಪು ಪ್ರಕಟಿಸಲಿದೆ.
ಲಷ್ಕರ್ ಇ ತೋಯ್ಬಾ ಸಂಘಟನೆಯ 10 ಭಯೋತ್ಪಾದಕರು 2008ರ ನವೆಂಬರ್ 26ರಂದು ಸಾಗರ ಮಾರ್ಗವಾಗಿ ಮುಂಬೈಗೆ ಬಂದು ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಒಂಬತ್ತು ಉಗ್ರರು ಸಾವನ್ನಪ್ಪಿದ್ದರೆ, ಪಾಕಿಸ್ತಾನದ ಫರೀದ್‌ಕೋಟ್ ನಿವಾಸಿ ಕಸಬ್ ಮಾತ್ರ ಬದುಕುಳಿದಿದ್ದ. ಘಟನೆಯಲ್ಲಿ 25 ವಿದೇಶೀಯರೂ ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. 304 ಮಂದಿ ಗಾಯಗೊಂಡಿದ್ದರು.
ಭಾರತೀಯ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾಬುದ್ದೀನ್ ಅಹ್ಮದ್ ಅವರು ದಾಳಿಗೆ ಪಿತೂರಿ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಇವರಿಬ್ಬರು ಭಯೋತ್ಪಾದನಾ ಗುರಿಗಳಿಗೆ ಸಹಕಾರ ನೀಡುವ ನಕ್ಷೆಗಳನ್ನು ಲಷ್ಕರ್ ಇ ತೋಯ್ಬಾಗೆ ಒದಗಿಸಿದ್ದರು.
ಕಸಬ್ ಸೇರಿದಂತೆ ಈ ಮೂವರು ತಪ್ಪಿತಸ್ಥರು ಎಂದು ಸೋಮವಾರ ವಿಶೇಷ ನ್ಯಾಯಾಲಯವು ಪ್ರಕಟಿಸಿದಲ್ಲಿ, ಮರಣ ದಂಡನೆ ಶಿಕ್ಷೆಯನ್ನು ಪಡೆಯುವ ಸಾಧ್ಯತೆಗಳಿವೆ.
ಭಾರತದಲ್ಲಿ ನಡೆದಿರುವ ಭಯೋತ್ಪಾದನಾ ಪ್ರಕರಣಗಳಲ್ಲಿ ಅತಿ ಶೀಘ್ರದಲ್ಲಿ ವಿಚಾರಣೆ ಮುಗಿಸಿರುವ ಪ್ರಕರಣ ಇದೆಂದು ಹೇಳಲಾಗಿದ್ದು, 271 ಕಾರ್ಯನಿರತ ದಿನಗಳಲ್ಲಿ 658 ಸಾಕ್ಷಿಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈ ವಿಶೇಷ ನ್ಯಾಯಾಲಯವನ್ನು ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲೇ ಸ್ಥಾಪಿಸಲಾಗಿತ್ತು. ಮೇ 8ರಂದು ಇದು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಸಾಕ್ಷಿಗಳ ವಿಚಾರಣೆ ನಂತರ 3,192 ಪುಟಗಳ ಪುರಾವೆಗಳನ್ನು ದಾಖಲಿಸಿಕೊಂಡಿದೆ.
ಈ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಎಂ.ಎಲ್. ತಹಲಿಯಾನಿ ಅವರೆದುರು, ಮುಂಬೈಯಲ್ಲಿ ಗುಂಡು ಹಾರಾಟ ನಡೆಸಿದವನು ಕಸಬ್ ಎಂದು 30 ಮಂದಿ ಸಾಕ್ಷಿ ಹೇಳಿದ್ದಾರೆ.
ಉಜ್ವಲ್ ನಿಕಂ ನೇತೃತ್ವದ ಸರಕಾರಿ ಪರ ವಕೀಲರು ತನಿಖೆಯ ಸಂದರ್ಭದಲ್ಲಿ 1,015 ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 1,691 ದಾಖಲೆಗಳನ್ನು ಕೂಡ ಸಲ್ಲಿಸಲಾಗಿದೆ. ಈ ದಾಳಿಯಲ್ಲಿ ಲಷ್ಕರ್ ಇ ತೋಯ್ಬಾವು ಪಾಕಿಸ್ತಾನದ ಭದ್ರತಾ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಳಸಿತ್ತು ಎಂದೂ ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ವಾದಿಸಿತ್ತು.