ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೋಯಿಬ್ ಅಖ್ತರ್‌ನನ್ನು ಮದುವೆಯಾಗುತ್ತಿಲ್ಲ: ದಿಯಾ ಮಿರ್ಜಾ
(Dia Mirza | Shoaib Akhtar | Bollywood actress | Pakistan)
ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಅವರನ್ನು ವಿವಾಹವಾದ ಬೆನ್ನಿಗೆ ಮತ್ತೊಂದು ಸುದ್ದಿ ಹುಟ್ಟಿಕೊಂಡಿದೆ. ಅದು ಪಾಕ್‌ನ ಮತ್ತೊಬ್ಬ ಆಟಗಾರ ಶೋಯಿಬ್ ಅಖ್ತರ್ ಅವರನ್ನು ಬಾಲಿವುಡ್ ನಟಿ ದಿಯಾ ಮಿರ್ಜಾ ಮದುವೆಯಾಗಲಿದ್ದಾರೆ ಎನ್ನುವುದು. ಆದರೆ ಇದನ್ನು ಸ್ವತಃ ನಟಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ದಿಯಾ ಮಿರ್ಜಾ ಮತ್ತು ಅಖ್ತರ್ ಮದುವೆಯಾಗಲಿದ್ದಾರೆ ಎಂದು ಪಾಕಿಸ್ತಾನದ ಜಿಯೋ ಟಿವಿ ಚಾನೆಲ್ ಸುದ್ದಿ ಪ್ರಕಟಿಸಿತ್ತು. ತನ್ನಲ್ಲಿ ಈ ಬಗ್ಗೆ ಸಾಕಷ್ಟು ಪುರಾವೆಗಳಿವೆ, ಸ್ವತಃ ದಿಯಾ ಮಿರ್ಜಾರೇ ಇದನ್ನು ಖಚಿತಪಡಿಸಿದ್ದಾರೆ ಎಂದು ಚಾನೆಲ್ ಹೇಳಿಕೊಂಡಿತ್ತು. ಇದರ ಬೆನ್ನಿಗೆ ಪಾಕಿಸ್ತಾನದ ಹಲವು ಟ್ಯಾಬ್ಲಾಯ್ಡ್ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ಸುದ್ದಿ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ದಿಯಾ ಮಿರ್ಜಾ, ನಾನು ಶೋಯಿಬ್ ಅಖ್ತರ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂಬ ವರದಿಯಲ್ಲಿ ಸತ್ಯಾಂಶವಿಲ್ಲ; ಇಂದು ಸಂಪೂರ್ಣವಾಗಿ ಆಧಾರರಹಿತವಾದದ್ದು. ಅಂತಹ ಯಾವುದೇ ಉದ್ದೇಶವೂ ನನ್ನಲ್ಲಿ ಇಲ್ಲ. ಇಂತಹ ಗಾಳಿ ಸುದ್ದಿಗಳಿಗೆ ಯಾರೂ ಮಹತ್ವ ನೀಡಬೇಡಿ ಎಂದಿದ್ದಾರೆ.
ನೀವು ಪಾಕಿಸ್ತಾನಿ ಕ್ರಿಕೆಟಿಗನನ್ನು ಮದುವೆಯಾಗುತ್ತಿದ್ದೀರಾ ಎಂದು ಪತ್ರಕರ್ತರು ಬೆನ್ನುಬೆನ್ನಿಗೆ ದೂರವಾಣಿ ಕರೆ ಮಾಡಲಾರಂಭಿಸಿದಾಗ ನನಗೆ ಆಘಾತವಾಗಿತ್ತು. ನಿಜಕ್ಕೂ ನನಗೆ ಶೋಯಿಬ್ ಅಖ್ತರ್ ಯಾರೆಂದೇ ಗೊತ್ತಿಲ್ಲ. ಈ ಸುದ್ದಿ ಎಲ್ಲಿ ಹುಟ್ಟಿಕೊಂಡಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ಆದರೆ ಇದು ಖಂಡಿತಾ ನಿಜವಾದ ಸುದ್ದಿಯಲ್ಲ ಎಂದಿದ್ದಾರೆ ದಿಯಾ ಮಿರ್ಜಾ.
ಆಸಕ್ತಿದಾಯಕ ವಿಚಾರವೆಂದರೆ ಇದನ್ನು ಹೌದು ಅಥವಾ ಇಲ್ಲ ಎನ್ನುವ ಯಾವುದೇ ಹೇಳಿಕೆಯನ್ನು ಇದುವರೆಗೂ ಶೋಯಿಬ್ ಅಖ್ತರ್ ನೀಡದೇ ಇರುವುದು.
ಅಖ್ತರ್ ಮತ್ತು ದಿಯಾ ಮಿರ್ಜಾ ನಡುವಿನ ವಿವಾಹ ನಿಶ್ಚಿತಾರ್ಥ ಮುಂದಿನ ತಿಂಗಳು ನಡೆಯಲಿದೆ, ಈ ಬಗ್ಗೆ ನಮಗೆ ಖಚಿತ ಮಾಹಿತಿಯಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಹೇಳಿಕೊಂಡಿದ್ದವು.