ಪಾಕಿಸ್ತಾನದ ಐಎಸ್‌ಐಗೆ ಗೂಢಚಾರ್ಯೆ ನಡೆಸುತ್ತಿದ್ದ ಭಾರತೀಯ ರಾಯಭಾರಿ ಮಾಧುರಿ ಗುಪ್ತಾ ಜಮ್ಮು ಪ್ರವಾಸ ಸಂದರ್ಭದಲ್ಲಿ ತನ್ನ ಪಾಕಿಸ್ತಾನಿ ನಿಯಂತ್ರಕನಿಗಾಗಿ ಪೊಟ್ಟಣವೊಂದನ್ನು ಪಡೆದುಕೊಂಡಿದ್ದಳು ಎಂದು ಗುಪ್ತಚರ ಮೂಲಗಳು ಹೇಳಿವೆ.
ಪ್ರಸಕ್ತ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಗುಪ್ತಾ ತನ್ನ ಮಾರ್ಚ್ 30ರ ಜಮ್ಮು ಪ್ರವಾಸದ ಸಂದರ್ಭದಲ್ಲಿ ನಗರದ ರಘುನಾಥ್ ಬಜಾರ್ ಪ್ರದೇಶದಲ್ಲಿ ಪ್ಯಾಕೆಟ್ ಒಂದನ್ನು ಪಡೆದುಕೊಂಡಿದ್ದಳು. ಇದನ್ನು ಆಕೆಗೆ ನೀಡಿದ್ದು ಯಾರು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
PTI
ಇಸ್ಲಾಮಾಬಾದ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಎರಡನೇ ಶ್ರೇಣಿಯ ಕಾರ್ಯದರ್ಶಿಯಾಗಿದ್ದ ಗುಪ್ತಾ ಜಮ್ಮು ನಗರದಲ್ಲಿ ಶಾಪಿಂಗ್ ಮಾಡುವ ವೇಳೆಯಲ್ಲಿ ಸ್ಥಳೀಯ ಚಾಲಕನೊಬ್ಬನನ್ನು ನೇಮಿಸಿಕೊಂಡಿದ್ದಳು. ಜಮ್ಮುವಿನಿಂದ 120 ಕಿಲೋ ಮೀಟರ್ ದೂರದಲ್ಲಿರುವ ಸುಂದರ್‌ಬನಿಯಲ್ಲಿನ ವೈದ್ಯ ದಂಪತಿಯ ಮನೆ ಸೇರಿದಂತೆ ಗಡಿ ಪ್ರದೇಶದಾದ್ಯಂತ ಆಕೆ ದೂತವಾಸದ ನಂಬರ್ ಪ್ಲೇಟ್ ಹೊಂದಿರುವ ಕಾರಿನಲ್ಲೇ ಸುತ್ತಾಡಿದ್ದಳು.
ಸುಂದರ್‌ಬನಿಯಿಂದ ಜಮ್ಮುವಿಗೆ ಮತ್ತು ಮಾರ್ಚ್ 30ರಂದು ವಾಪಸ್ ಬರಲು ಗುಪ್ತಾ ತನ್ನ ಕಾರಿಗೆ ಚಾಲಕನಾಗಿ ಸುಂದರ್‌ಬನಿಯ ದೇಸ್ ರಾಜ್ ಎಂಬಾತನನ್ನು ನೇಮಿಸಿಕೊಂಡಿದ್ದಳು. ಆಕೆ ಜಮ್ಮುವಿನ ರಘುನಾಥ್ ಬಜಾರ್ ಪ್ರದೇಶದಲ್ಲಿ ಸ್ವಲ್ಪ ಶಾಪಿಂಗ್ ಮಾಡಿದ ನಂತರ ಅಲ್ಲೇ ತನ್ನ ಪಾಕಿಸ್ತಾನಿ ನಿಯಂತ್ರಕ ವ್ಯಕ್ತಿಗಾಗಿ ಪ್ಯಾಕೆಟ್ ಒಂದನ್ನು ವ್ಯಕ್ತಿಯೊಬ್ಬನಿಂದ ಪಡೆದುಕೊಂಡಿದ್ದಳು ಎಂದು ಆರೋಪಿಸಲಾಗಿದೆ.
ಶ್ರೀ ಮಹಾರಾಜ ಗುಲಾಬ್ ಸಿಂಗ್ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ನಿಲುಗಡೆ ಮಾಡಲಾಗಿತ್ತು. ಗುಪ್ತಾ ಶಾಪಿಂಗ್ ಮುಗಿಸಿ ವಾಪಸ್ ಬರುವವರೆಗೆ ಸುಮಾರು 90 ನಿಮಿಷಗಳ ಕಾಲ ಚಾಲಕ ಅಲ್ಲೇ ಇದ್ದ. ನಂತರ ಸುಂದರ್‌ಬನಿಗೆ ವಾಪಸಾಗುವ ಮೊದಲು ಅಲ್ಲಿಂದ ಗಾಂಧಿ ನಗರದ ಪ್ರಸಿದ್ಧ ಬೇಕರಿಯೊಂದಕ್ಕೆ ಕಾರನ್ನು ಕೊಂಡೊಯ್ಯುವಂತೆ ಗುಪ್ತಾ ಸೂಚಿಸಿದ್ದಳು.
ಗುಪ್ತಾಳಿಗೆ ಚಾಲಕನನ್ನು ಒದಗಿಸಿದ್ದು ಖಾಮ್ ರಾಜ್ ಶರ್ಮಾ. ಅವರ ಮನೆಯಲ್ಲೇ ಗುಪ್ತಾ ಜಮ್ಮುವಿಗೆ ಬಂದಾಗ ಉಳಿದುಕೊಂಡಿದ್ದಳು.
ಅದೇ ಹೊತ್ತಿಗೆ ನಾನೇನೂ ತಪ್ಪು ಮಾಡಿಲ್ಲ, ಯಾವುದೇ ಮಾಹಿತಿಗಳನ್ನು ಹಸ್ತಾಂತರಿಸಿಲ್ಲ. ನನ್ನನ್ನು ಸಿಕ್ಕಿಸಿ ಹಾಕಲಾಗಿದೆ ಎಂದು ಗುಪ್ತಾ ಆರೋಪಿಸಿದ್ದಾಳೆ ಎಂದೂ ಮೂಲಗಳು ಹೇಳಿವೆ.