ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆತ ಏನೂ ತಿನ್ನಲ್ಲ, ನೀರೂ ಕುಡಿಯಲ್ಲ, ಮೂತ್ರನೂ ಮಾಡಲ್ಲ!
(Prahlad Jani | DIPAS | Lived Without Food | Sterling Hospital)
ಹುಲು ಮಾನವನೊಬ್ಬ 65 ವರ್ಷಗಳಿಂದ ಏನೂ ತಿನ್ನದೆ, ನೀರೂ ಕುಡಿಯದೆ, ಮಲ-ಮೂತ್ರ ವಿಸರ್ಜಿಸದೆ ಜೀವಿಸಿದ್ದಾನೆ ಎಂದರೆ ನಂಬಲು ಯಾರು ತಾನೇ ಸಿದ್ಧರಿದ್ದಾರೆ? ಆದರೆ ಇದು ಸತ್ಯ ಎಂದು ಒಪ್ಪಿಕೊಳ್ಳಲು ಸ್ವತಃ ವೈದ್ಯರೇ ಸಿದ್ಧರಾಗುತ್ತಿದ್ದಾರೆ!
ಆ ವ್ಯಕ್ತಿ ಹೆಸರು ಪ್ರಹ್ಲಾದ್ ಜಾನಿ. ತಾನು ದೈವಾಂಶ ಸಂಭೂತ, ತನಗೆ ದೇವಿಯ ಆಶೀರ್ವಾದವಿದೆ ಎಂದು ಹೇಳಿಕೊಳ್ಳುವ ಇವರಿಗೀಗ 82ರ ವಯಸ್ಸು. ತನಗೆ ಎಂಟರ ವಯಸ್ಸಿನಲ್ಲೇ ದೇವಿ ಆಶೀರ್ವಾದ ಮಾಡಿದ್ದಳು ಎಂದು ಹೇಳುವ ಈ ಪ್ರಹ್ಲಾದ್ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಚರೋಡ್ ಗ್ರಾಮದವರು.
ತನ್ನನ್ನು ತಾನು ಮಾತಾಜಿ ಎಂದು ಕರೆಸಿಕೊಳ್ಳುವ ಈ ಪ್ರಹ್ಲಾದ್ ಎಂಬ ವಯೋವೃದ್ಧ ಕಾವಿಧಾರಿ ಸನ್ಯಾಸಿ. ಹೊಟ್ಟೆಗೇನೂ ತಿನ್ನದೆ ಹೇಗೆ ಬದುಕುತ್ತಿದ್ದೀರಿ? ನಿಮಗೆ ಶಕ್ತಿ ಎಲ್ಲಿಂದ ಬರುತ್ತದೆ ಎಂದೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟರೆ, ದೇವಿಯ ಕೃಪೆಯಿಂದ ನನಗೆ ಇದೆಲ್ಲ ಸಾಧ್ಯವಾಗಿದೆ ಎಂದಷ್ಟೇ ಉತ್ತರಿಸುತ್ತಾರೆ.
ದೇಶ-ವಿದೇಶಗಳ ಮಾಧ್ಯಮಗಳಲ್ಲಿ ಈಗಾಗಲೇ ಹಲವು ಬಾರಿ ಸುದ್ದಿಯಾಗಿದ್ದು, ಈ ಹಿಂದೊಮ್ಮೆ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಜಸ್ಟ್ ಪಾಸಾದವರು. ಆದರೂ ನಂಬಲು ಸಾಧ್ಯವಿಲ್ಲ ಎನ್ನುತ್ತಿರುವ ವೈದ್ಯರು ಮತ್ತೆ ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತೆ ಶುರುವಾಗಿದೆ ಪರೀಕ್ಷೆ... ತಿಂಡಿ-ತೀರ್ಥವಿಲ್ಲದೆ ಬದುಕುತ್ತಾ ವೈದ್ಯಲೋಕಕ್ಕೆ ಸವಾಲಾಗುತ್ತಿರುವ ಪ್ರಹ್ಲಾದ್ ಬಗ್ಗೆ ವೈದ್ಯರ ಗುಂಪೊಂದು ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಬಾರಿ ಶರೀರಶಾಸ್ತ್ರ ಮತ್ತು ಸಂಬಂಧಿತ ವಿಜ್ಞಾನಗಳ ರಕ್ಷಣಾ ವಿಶ್ವವಿದ್ಯಾಲಯ (ಡಿಐಪಿಎಎಸ್) ಮತ್ತು ಗುಜರಾತ್ ಸರಕಾರ ಜಂಟಿಯಾಗಿ ಪರೀಕ್ಷೆಯನ್ನು ನಡೆಸುತ್ತಿದೆ.
ಪ್ರಹ್ಲಾದ್ ಅವರನ್ನು ಅಹಮದಾಬಾದ್‌ನ ಸ್ಟೆರ್ಲಿಂಗ್ ಆಸ್ಪತ್ರೆಯಲ್ಲಿ ವಿಚಕ್ಷಣೆಗೊಳಪಡಿಸಲಾಗುತ್ತಿದೆ. ಅವರ ಕೋಣೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 35 ಮಂದಿ ವೈದ್ಯರ ತಂಡ ನಿರಂತರ ಪರಿಶೀಲನೆ ನಡೆಸುತ್ತಿದೆ.
ಅವರಿಗೆ ನೀರು, ಆಹಾರ ಅಥವಾ ಯಾವುದೇ ವಸ್ತು ಅಥವಾ ದ್ರವ ಪದಾರ್ಥವನ್ನು ತಿನ್ನಲು ನೀಡಲಾಗುತ್ತಿಲ್ಲ. ಪ್ರಹ್ಲಾದ್ ಬಾತ್‌ರೂಂಗೂ ಹೋಗುತ್ತಿಲ್ಲ. ಏಪ್ರಿಲ್ 22ರಂದು ಈ ಪ್ರಯೋಗ ಆರಂಭವಾಗಿದೆ. ಇದುವರೆಗೆ ಅವರ ಆರೋಗ್ಯದಲ್ಲಿ ಯಾವುದೇ ಅಸ್ಥಿರತೆ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ಪರೀಕ್ಷೆ 15 ದಿನಗಳ ಕಾಲ ಮುಂದುವರಿಯಲಿದೆ. ಅಂದರೆ ಮೇ ಏಳಕ್ಕೆ ಮುಕ್ತಾಯಗೊಳ್ಳಲಿದೆ. ಅಂದು ವೈದ್ಯರು ತಮ್ಮ ಸ್ಪಷ್ಟ ಉತ್ತರವನ್ನು ನೀಡಲಿದ್ದಾರೆ.
ಈ ಹಿಂದೆ ಜಸ್ಟ್ ಪಾಸಾಗಿದ್ದರು.. ಪ್ರಹ್ಲಾದ್ ಅವರನ್ನು ಈ ಹಿಂದೆ 2003ರಲ್ಲೂ ಇದೇ ರೀತಿಯ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ಆಗ ಈ ಸನ್ಯಾಸಿಯನ್ನು 10 ದಿನಗಳ ಕಾಲ ದಿಗ್ಬಂಧನದಲ್ಲಿಟ್ಟು ನರರೋಗ ತಜ್ಞ ಡಾ. ಸುಧೀರ್ ಶಾಹ್ ಮತ್ತು ಅವರ ತಂಡ ನಿರಂತರ ತಪಾಸಣೆಗಳನ್ನು ನಡೆಸಿತ್ತು.
ಪರೀಕ್ಷೆ ನಡೆಸಿದಾಗ ಅವರ ಮೂತ್ರಕೋಶದಲ್ಲಿ 120 ಎಂಎಲ್ ಮೂತ್ರವಿದ್ದುದನ್ನು ನಾವು ಪತ್ತೆ ಹಚ್ಚಿದ್ದೆವು. ಅದನ್ನು 50 ಎಂಎಲ್‌ಗೆ ಇಳಿಸುವಂತೆ ಹೇಳಿದಾಗ, ಮೂತ್ರ ಮಾಡದೆ ಕೆಲವೇ ಹೊತ್ತಿನಲ್ಲಿ ನಾವು ಹೇಳಿದಂತೆ ಮಾಡಿದರು. ಸಂಜೆ ಹೊತ್ತು ಮೂತ್ರಕೋಶದಿಂದ ಮೂತ್ರವನ್ನು ಪೂರ್ತಿಯಾಗಿ ಖಾಲಿ ಮಾಡುವಂತೆ ಹೇಳಿದಾಗ ಚಾಚೂ ತಪ್ಪದೆ ಮೂತ್ರ ಮಾಡದೆ ಖಾಲಿ ಮಾಡಿದ್ದರು.
ಆದರೆ ಪರೀಕ್ಷೆ ಮುಗಿಯುವಷ್ಟರಲ್ಲಿ ಅವರ ಶರೀರ ತೂಕ ಕಳೆದುಕೊಂಡಿತ್ತು. ತಾನು ನಿರಂತರವಾಗಿ ಉಪವಾಸ ಮಾಡುತ್ತಿದ್ದೇನೆ ಎಂಬುದನ್ನು ಪೂರ್ತಿಯಾಗಿ ನಂಬಲು ಆ ಮೂಲಕ ಸಾಧ್ಯವಾಗಿರಲಿಲ್ಲ ಎಂದು ವೈದ್ಯರ ತಂಡ ತಿಳಿಸಿದೆ.