ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾಧ್ಯಮಗಳು ತಮ್ಮನ್ನು ನೋಡಿಕೊಂಡ ರೀತಿಗೆ ಹೇವರಿಕೆ ವ್ಯಕ್ತಪಡಿಸಿರುವ ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್, ತಾನು ಪತ್ನಿ ಸಾನಿಯಾ ಮಿರ್ಜಾಗೆ ಬಾಡಿಗಾರ್ಡ್ ಆಗುವ ಪ್ರಸಂಗ ಬಂದಿದೆ ಎಂದು ಹೇಳಿಕೊಂಡಿದ್ದಾರೆ.
ಮಾಧ್ಯಮಗಳಿಗೆ ಬೇಕಾಗಿರುವುದು ಮಸಾಲಾ ಸುದ್ದಿ. ಆದರೆ ಇದರಿಂದ ಮತ್ತೊಬ್ಬರ ವೈಯಕ್ತಿಕ ಜೀವನದ ಮೇಲೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಸಾನಿಯಾ ಪತ್ರಕರ್ತರೊಂದಿಗೆ ಹೇಳುತ್ತಿದ್ದಂತೆ ನಡುವೆ ಬಾಯಿ ಹಾಕಿದ ಶೋಯಿಬ್, ಒಬ್ಬ ಗಂಡನಾಗಿ ನಾನೀಗ ಸೆಕ್ಯುರಿಟಿ ಗಾರ್ಡ್ ಪಾತ್ರ ನಿರ್ವಹಿಸಬೇಕಾಗಿದೆ ಎಂದರು.
PR
ಪಾಕಿಸ್ತಾನದಲ್ಲಿ ನಡೆದ ಮದುವೆ ಸಂಭ್ರಮಗಳು ಚೆನ್ನಾಗಿದ್ದವು. ಆದರೆ ಮಾಧ್ಯಮಗಳು ಖಾಸಗಿ ಕಾರ್ಯಕ್ರಮಕ್ಕೆ ಅತಿರೇಕದ ಪ್ರಾಮುಖ್ಯತೆ ಕೊಟ್ಟವು. ಈ ಮದುವೆ ಇಬ್ಬರು ವ್ಯಕ್ತಿಗಳ, ಇಬ್ಬರು ಸಾಮಾನ್ಯ ವ್ಯಕ್ತಿಗಳ ನಡುವಿನ ಮದುವೆ ಅಷ್ಟೇ... ಎಂದು ತಿಳಿಸಿದ್ದಾರೆ.
ಮತ್ತೊಬ್ಬರ ಜೀವನದಲ್ಲಿ ಆಟವಾಡುವ ಮಾಧ್ಯಮಗಳೊಂದಿಗೆ ತಾನು ಮಾತನಾಡಲು ಇಚ್ಛಿಸುವುದಿಲ್ಲ ಎಂದು ಖಾರವಾಗಿಯೇ ತಿಳಿಸಿರುವ ಶೋಯಿಬ್, ಮಾಧ್ಯಮಗಳು ನಮಗೆ ಮಾತನಾಡಲು ಅವಕಾಶವನ್ನೇ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ನೀವು ಸಾರ್ವಜನಿಕವಾಗಿ ಯಾಕೆ ನಗುತ್ತಿಲ್ಲ ಎಂದು ಸಾನಿಯಾರನ್ನು ಖಾಸಗಿ ಟಿವಿ ಚಾನೆಲ್ ಒಂದು ಪ್ರಶ್ನಿಸಿದಾಗ, 'ಜನಜಂಗುಳಿಯಲ್ಲಿ ನಾನು ಸಿಲುಕಿಕೊಂಡಿರುವಾಗ, ಜನ ನನ್ನ ಮೇಲೆ ಬೀಳುತ್ತಿರುವಾಗ ನಾನು ಹೇಗೆ ನಗಲಿ? ಲಾಹೋರ್‌ನಲ್ಲಿ ನೂಕುನುಗ್ಗಲಿನಿಂದ ನನ್ನ ತಾಯಿ ಬಿದ್ದ ನಂತರ ನಾನು ಅತ್ತಿದ್ದೆ ಎನ್ನುವ ವರದಿಗಳು ಸರಿಯಲ್ಲ..' ಎಂದರು.
ಒಬ್ಬ ಸಾಮಾನ್ಯ ವ್ಯಕ್ತಿ ಆಘಾತಕ್ಕೊಳಗಾಗುವಂತೆ ನಾನೂ ನನ್ನ ಬಿದ್ದಾಗ ಗಾಯವಾಗಿರಬಹುದೆಂದು ಗಾಬರಿಗೊಂಡಿದ್ದೆ. ನಾನು ಸಂತೋಷವಾಗಿದ್ದೇನೆ. ಖಂಡಿತಾ ನಗುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ನಾನು ಯಾವಾಗಲೂ ನಗುತ್ತಿದ್ದರೆ, ಜನ ನನ್ನನ್ನು ಹುಚ್ಚಿ ಎಂದು ಕರೆದು ಬಿಡುತ್ತಾರೆ ಎಂದು ಸಾನಿಯಾ ಹೇಳಿದ್ದಾರೆ.