ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಪರಾಧಿ ಹಿನ್ನೆಲೆಯುಳ್ಳವರನ್ನು ಬಹುಜನ ಸಮಾಜ ಪಕ್ಷಕ್ಕೆ ಸೇರಿಸುವಲ್ಲಿ ವಿರೋಧ ಪಕ್ಷಗಳು ಸಂಚು ರೂಪಿಸಿದ್ದವು ಎಂದು ದೂಷಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಇದೇ ಕಾರಣದಿಂದ ಭಾರೀ ಸಂಖ್ಯೆಯಲ್ಲಿ ಕ್ರಿಮಿನಲ್‌ಗಳನ್ನು ಹೊರದಬ್ಬುವ ಕ್ರಮಕ್ಕೆ ತಾನು ಮುಂದಾಗಬೇಕಾಯಿತು ಎಂದು ಹೇಳಿದ್ದಾರೆ.
ಬಿಎಸ್‌ಪಿಯಲ್ಲಿ ಕ್ರಿಮಿನಲ್ ಹಿನ್ನೆಲೆಯಿದ್ದ ಸುಮಾರು 500 ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷದ ವರಿಷ್ಠೆ ಮಾಯಾವತಿ ನಿನ್ನೆಯಷ್ಟೇ ವಜಾಗೊಳಿಸಿದ್ದರು. ಇದರ ಬೆನ್ನಿಗೆ ಎರಡನೇ ಹಂತದ ಮತ್ತೊಂದು ಪಟ್ಟಿ ಸಿದ್ಧವಾಗುತ್ತಿದ್ದು, ಮೇ 13ರೊಳಗೆ ಉಳಿದಿರುವ ಕ್ರಿಮಿನಲ್‌ಗಳನ್ನು ಪಕ್ಷದಿಂದ ಹೊರಗೆ ಹಾಕಲಾಗುತ್ತದೆ.
ಕ್ರಿಮಿನಲ್ ಶಕ್ತಿಗಳ ಸಹಕಾರದೊಂದಿಗೆ ಯಾವತ್ತೂ ಅಧಿಕಾರಕ್ಕೆ ಬರುವ ಕನಸು ಕಾಣುವ ಸಮಾಜವಾದಿ ಪಕ್ಷ ಮತ್ತು ಇತರ ವಿರೋಧ ಪಕ್ಷಗಳು ತಮ್ಮ ಪಿತೂರಿಯ ಅಂಗವಾಗಿ ಕ್ರಿಮಿನಲ್ ಶಕ್ತಿಗಳನ್ನು ವಿಧಾನಸಭಾ ಚುನಾವಣೆಗೂ ಮೊದಲು ಬಿಎಸ್‌ಪಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಮಾಯಾವತಿ ಆರೋಪಿಸಿದ್ದಾರೆ.
ಇದನ್ನು ತಿಳಿದುಕೊಂಡಿರುವ ಪಕ್ಷ ಇದೀಗ ಕ್ರಿಮಿನಲ್ ಶಕ್ತಿಗಳನ್ನು ಹೊರದಬ್ಬುವ ಕೆಲಸಕ್ಕೆ ಮುಂದಾಗಿದ್ದು, ಈಗಾಗಲೇ 500 ಮಂದಿಯನ್ನು ಉಚ್ಛಾಟನೆಗೊಳಿಸಲಾಗಿದೆ. ಇನ್ನುಳಿದವರನ್ನೂ ಶೀಘ್ರದಲ್ಲೇ ಖಾಲಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದಿನ ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದ 'ಜಂಗಲ್‌ರಾಜ್' ಪರಿಸ್ಥಿತಿಯನ್ನು ಮಟ್ಟ ಹಾಕಲು ರಾಜ್ಯದಲ್ಲಿ ಬಹುಮತದೊಂದಿಗೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಕ್ರಮಗಳನ್ನು ಬಿಎಸ್‌ಪಿ ಜಾರಿಗೊಳಿಸಿದೆ ಎಂದಿರುವ ಅವರ ಪ್ರಕಾರ, ವಿರೋಧ ಪಕ್ಷಗಳು ಅಧಿಕಾರಕ್ಕೆ ಬರಲು ಅಸಾಧ್ಯವಾದ ನಂತರ ಕ್ರಿಮಿನಲ್ ಶಕ್ತಿಗಳನ್ನು ಬಿಎಸ್‌ಪಿಯೊಳಗೆ ಕಳುಹಿಸಿ ಪಿತೂರಿ ನಡೆಸಿವೆ.