ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಡ್ಲಿಗೆ ಸಹಕರಿಸಿದ 'ಜಾತ್ಯತೀತ'ರನ್ನು ಪತ್ತೆ ಮಾಡಿ: ಬಿಜೆಪಿ (BJP | Nitin Gadkari | David Coleman Headley | Mumbai attack)
Bookmark and Share Feedback Print
 
ಮುಂಬೈ ದಾಳಿ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಗೆ ಸಹಕರಿಸಿದ ಭಾರತದ ಕಪಟ ಜಾತ್ಯತೀತರನ್ನು ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಆಗ್ರಹಿಸಿದ್ದಾರೆ.

ಹೆಡ್ಲಿ ಭಾರತದಲ್ಲಿ ನಿರ್ಮಿಸಿಕೊಂಡಿದ್ದ ಪ್ರಬಲ ಸಂಬಂಧಗಳ ಕುರಿತು ಸೂಕ್ತ ತನಿಖೆ ನಡೆಸಬೇಕು. ಆತ ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಸಹಾಯ ಮಾಡಿದ್ದ ಜಾತ್ಯತೀತತೆಯ ಸೋಗಿನ ವ್ಯಕ್ತಿಗಳ ಪಾತ್ರವನ್ನು ಹೊರಗೆಡವಲು ತನಿಖೆ ಅಗತ್ಯವಿದೆ ಎಂದು ಗಡ್ಕರಿ ಆಗ್ರಹಿಸಿದರು.

ದೇಶೀಯ ವ್ಯಕ್ತಿಗಳ ಸಹಕಾರವಿಲ್ಲದೆ ಹೆಡ್ಲಿ ಭಾರತಕ್ಕೆ ಹಲವು ಬಾರಿ ಭೇಟಿ ನೀಡಲು ಮತ್ತು ತನ್ನ ರಹಸ್ಯ ಕಾರ್ಯಾಚರಣೆಗಳನ್ನು ಸುದೀರ್ಘಾವಧಿಯವರೆಗೆ ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿ ಅಧ್ಯಕ್ಷರ ಅನಿಸಿಕೆ.

ಹೆಡ್ಲಿ ಯಾರ ಜತೆಗೆಲ್ಲ ಸಂಪರ್ಕದಲ್ಲಿದ್ದ, ಯಾರ ಜತೆಗೆಲ್ಲ ಮಾತುಕತೆ ನಡೆಸಿದ್ದ, ಯಾರೆಲ್ಲ ಆತನಿಗೆ ಕರೆ ಮಾಡಿದ್ದರು, ಯಾರೆಲ್ಲ ಆತನ ಜತೆಗೆ ವಾಸಿಸಿದ್ದರು, ಆತನಿಗೆ ಆಶ್ರಯ ಕೊಟ್ಟವರು ಮತ್ತು ಬೇರೆ ಬೇರೆ ರೀತಿಗಳಲ್ಲಿ ಸಹಾಯ ಮಾಡಿದವರನ್ನು ತನಿಖಾ ದಳಗಳು ಪತ್ತೆ ಹಚ್ಚಿ ಬಹಿರಂಗಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜಾತ್ಯತೀತ ಹೋರಾಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮತ್ತು ಕೋಮುವಾದವನ್ನು ವಿರೋಧಿಸುತ್ತಾ ಬಂದಿರುವ ಚಿತ್ರ ನಿರ್ಮಾಪಕ-ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್ ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿ ಜತೆ ಗೆಳೆತನ ಹೊಂದಿದ್ದನ್ನು ಪರೋಕ್ಷವಾಗಿ ಗಡ್ಕರಿ ಬೆಟ್ಟು ಮಾಡಿ ತೋರಿಸಿರುವುದು ಇಲ್ಲಿ ಸ್ಪಷ್ಟವಾಗಿದೆ.

ಅದೇ ಹೊತ್ತಿಗೆ ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತನ್ನ ಮೃದು ನೀತಿಯಿಂದಾಗಿ ವಿಫಲವಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಭಯೋತ್ಪಾದಕರ ಕಡೆಗೆ ಮೃದು ನೀತಿ ಅನುಸರಿಸುತ್ತಿರುವ ಕಾರಣದಿಂದಾಗಿ ದೇಶದಲ್ಲಿ ಜನತೆ ಭೀತಿಯಡಿಯಲ್ಲಿ ಜೀವನ ಸಾಗಿಸುವಂತಾಗಿದೆ. ಅಮೆರಿಕಾದಲ್ಲಿ ಒಂಬತ್ತು ವರ್ಷಗಳ ಹಿಂದಿನ ದಾಳಿಯ ನಂತರ ಯಾವುದೇ ದಾಳಿಗಳನ್ನು ನಡೆಯದಂತೆ ಅವರು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಪ್ರತೀ ವಾರಕ್ಕೊಂದರಂತೆ ಭಯೋತ್ಪಾದನಾ ಬೆದರಿಕೆಗಳು ಬರುತ್ತಿವೆ. ಇದಕ್ಕೆ ಕಾರಣ ಯುಪಿಎ ಸರಕಾರದ ಓಟ್ ಬ್ಯಾಂಕ್ ರಾಜಕಾರಣ ಎಂದು ಗಡ್ಕರಿಯವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ