ಮುಂಬೈ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಂಬೈ ಲೋಕಲ್ ರೈಲ್ವೇ ಮೋಟಾರ್ ಸಿಬ್ಬಂದಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಹಾನಗರದ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅದೇ ವೇಳೆ ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿಗೊಳಿಸಲು ಮಹಾರಾಷ್ಟ್ರ ಸರಕಾರ ಯೋಚಿಸುತ್ತಿದೆ. ಇದೇ ವಿಚಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲೂ ತೀವ್ರ ಗದ್ದಲ ಸೃಷ್ಟಿಸಿದೆ.
ನಿನ್ನೆಯೇ ಪ್ರತಿಭಟನೆ ಆರಂಭವಾಗಿದ್ದರೂ, ಇಂದು ಅದು ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ 65 ಲಕ್ಷಕ್ಕೂ ಹೆಚ್ಚು ಲೋಕಲ್ ರೈಲ್ವೇ ಪ್ರಯಾಣಿಕರು ತೊಂದರೆಗೊಳಗಾಗಿದ್ದಾರೆ. ಪಶ್ಚಿಮ ರೈಲ್ವೇ ಮತ್ತು ಕೇಂದ್ರೀಯ ರೈಲ್ವೇಯ ಸುಮಾರು 600 ಮೋಟಾರ್ ಸಿಬ್ಬಂದಿಗಳು ಈ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದಿನವಹೀ ಪ್ರಯಾಣಿಕರಿಗೆ ರೈಲ್ವೇ ಇಲಾಖೆಯು ತನ್ನ ಸಹಾಯವಾಣಿಯಿಂದ ಸಂದೇಶವನ್ನು ಕಳುಹಿಸಿದ್ದು, ಜನತೆ ತುರ್ತು ಅವಶ್ಯಕತೆಗಳಿಗಾಗಿ ಮಾತ್ರ ರೈಲುಗಳನ್ನು ಬಳಸುವಂತೆ ಸೂಚನೆ ನೀಡಿದೆ.
ಸೋಮವಾರದ ಮುಷ್ಕರದಿಂದಾಗಿ ಸಾವಿರಾರು ಮಂದಿ ರಾತ್ರಿ ಮನೆಗೆ ಹೋಗುವಾಗ ತಡವಾಗಿತ್ತು. ಇಂದು ಮುಂಜಾನೆ ಶೇ.80ರಷ್ಟು ಅಂದರೆ ಸುಮಾರು 2,000 ರೈಲ್ವೇ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖೆ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಬಸ್ಸು ಮತ್ತಿತರ ವಾಹನಗಳನ್ನು ಅವಲಂಭಿಸಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆಗಳು ತೀವ್ರವಾಗಿವೆ.
ಈ ನಡುವೆ ಮಹಾರಾಷ್ಟ್ರ ರಾಜ್ಯ ಸರಕಾರವು ಮುಷ್ಕರ ನಿರತರ ಮೇಲೆ ಎಸ್ಮಾ ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಸಂಬಂಧ ಮುಖ್ಯಮಂತ್ರಿಯವರು ಸಂಪುಟ ಸಭೆ ನಡೆಸುತ್ತಿದ್ದಾರೆ.
ಇದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲೂ ಪ್ರತಿಧ್ವನಿಸಿದ್ದು, ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಹೇಳಿಕೆ ನೀಡಬೇಕೆಂದು ಎಡಪಕ್ಷಗಳು, ಬಿಜೆಪಿ, ಶಿವಸೇನೆ ಸದಸ್ಯರು ಆಗ್ರಹಿಸಿದ್ದಾರೆ.