ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡಿನಲ್ಲಿ ತಮಿಳು ಯುನಿಕೋಡ್‌ಗೆ ಸರಕಾರಿ ಮಾನ್ಯತೆ (Tamil Nadu | Unicode | Kannada | Poongothai Aladi Aruna)
Bookmark and Share Feedback Print
 
ವಿವಿಧ ಇಲಾಖೆಗಳು ಭಿನ್ನ ಸಾಫ್ಟ್‌ವೇರ್‌ಗಳನ್ನು ಬಳಸುವ ಮೂಲಕ ತಮಿಳು ಪ್ರಸಾರಕ್ಕೆ ಇಂಟರ್ನೆಟ್ ಸೇರಿದಂತೆ ಇತರೆಡೆ ಅಡ್ಡಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರಕಾರ ಸಾರ್ವತ್ರಿಕವಾಗಿ ಬಳಕೆಯಾಗುತ್ತಿರುವ 'ಯುನಿಕೋಡ್'ನ್ನು ಸರಕಾರಿ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಸರಕಾರಿ ಮಟ್ಟದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪೂರಕ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ರಾಜ್ಯ ಮಾಹಿತಿ ಹಕ್ಕು ಸಚಿವೆ ಪೂಂಗೊತೈ ಅಲಾಡಿ ಅರುಣಾ ಸೋಮವಾರ ವಿಧಾನಸಭೆಗೆ ತಿಳಿಸಿದ್ದಾರೆ.

ಮಾಹಿತಿ ಸುರಕ್ಷತಾ ನಿಯಮ, ಇ-ಆಡಳಿತ ಮತ್ತು ಇ-ತ್ಯಾಜ್ಯ ನೀತಿಗಳ ಬಗ್ಗೆ ತನ್ನ ಇಲಾಖೆಯು ಕಾರ್ಯನಿರತವಾಗಿದ್ದು, ಶೀಘ್ರದಲ್ಲೇ ಅನಾವರಣಗೊಳಿಸಲಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಕುರಿತು ನಡೆಯುತ್ತಿದ್ದ ಚರ್ಚೆಗೆ ಸಚಿವೆ ಉತ್ತರಿಸಿದರು.

ಇದರ ಮೊದಲ ಅಂಗವಾಗಿ ಪ್ರತಿ ವರ್ಷ ಮುಟ್ಟಬೇಕಾದ ನಿರ್ದಿಷ್ಠ ಗುರಿಗೆ ಸ್ಪಷ್ಟ ಚಿತ್ರಣಗಳನ್ನು ರೂಪಿಸಿಕೊಂಡು ಎಲ್ಲಾ ಇಲಾಖೆಗಳು ಮೂರು ವರ್ಷಗಳ ಇ-ಆಡಳಿತ ಯೋಜನೆಗೆ ಸಿದ್ಧರಾಗುವಂತೆ ಸೂಚಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸರಕಾರ ಬಳಸುತ್ತಿರುವ ಬಹುತೇಕ ತಮಿಳು ಫಾಂಟುಗಳು ಸ್ವಾಮ್ಯ ಹೊಂದಿರುವುದರಿಂದ ತಮಿಳು ಬೆಳವಣಿಗೆ ಇಂಟರ್ನೆಟ್ ಸೇರಿದಂತೆ ಇತರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರ್ಬಂಧಕ್ಕೆ ಒಳಗಾಗುತ್ತಿದೆ. ಇದನ್ನು ತಪ್ಪಿಸಿ ತಮಿಳನ್ನು ಸಾರ್ವತ್ರಿಕವಾಗಿಸಲು ತಮಿಳು ಯುನಿಕೋಡನ್ನು ಎಲ್ಲಾ ಇಲಾಖೆಗಳಲ್ಲಿ ಬಳಕೆ ಕಡ್ಡಾಯ ಮಾಡುವ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದು ಸಚಿವೆ ಅರುಣಾ ವಿವರಣೆ ನೀಡಿದರು.

ಕನ್ನಡದಲ್ಲಿ ಯುನಿಕೋಡ್, ನುಡಿ, ಶ್ರೀಲಿಪಿ, ಬರಹ, ಪ್ರಕಾಶಕ್ ಮುಂತಾದ ಸಾಫ್ಟ್‌ವೇರ್‌ಗಳು, ಫಾಂಟುಗಳ ಬಳಕೆಯಿಂದಾಗಿ ಬಳಕೆದಾರರಿಗೆ ಆಗುತ್ತಿರುವ ತೊಂದರೆಯ ರೀತಿಯಲ್ಲಿಯೇ ತಮಿಳಿನಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

ಇಂಟರ್ನೆಟ್ ಪತ್ರಿಕೆಗಳು, ಬ್ಲಾಗುಗಳು ಸೇರಿದಂತೆ ಇನ್ನಿತರ ಹತ್ತು-ಹಲವು ಕ್ಷೇತ್ರಗಳಲ್ಲಿ ಯುನಿಕೋಡ್ ಸಾರ್ವತ್ರಿಕವಾಗಿ ಬಳಕೆಯಾಗುತ್ತಿದ್ದರೂ ಕರ್ನಾಟಕ ಸರಕಾರ ಇದುವರೆಗೂ ಯುನಿಕೋಡನ್ನು ತನ್ನ ಅಧಿಕೃತ ಬಳಕೆಯನ್ನಾಗಿ ಆರಿಸಿಕೊಂಡಿಲ್ಲ. ಪ್ರಸಕ್ತ ತನ್ನ ವಿವಿಧ ಇಲಾಖೆಗಳಲ್ಲಿ ಬೇರೆ ಬೇರೆ ರೀತಿಯ ಫಾಂಟ್‌ಗಳನ್ನು ಕರ್ನಾಟಕ ಬಳಕೆ ಮಾಡುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ