ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಷ್ಕರ್ ಭಯೋತ್ಪಾದಕ ಹೈದರಾಬಾದ್‌ನಲ್ಲಿ ಟ್ಯಾಕ್ಸಿ ಚಾಲಕ..! (LeT | HITEC City | Lashkar-e-Taiba | Mohammad Zia Ul Haq)
Bookmark and Share Feedback Print
 
ಹೈದರಾಬಾದ್‌ನ ಐಟಿ ಟೌನ್‌ಶಿಪ್ ಪ್ರತಿಷ್ಠಿತ 'ಹೈಟೆಕ್ ಸಿಟಿ' ಮತ್ತು ಬಹುರಾಷ್ಟ್ರೀಯ ಲೆಕ್ಕ ಪರಿಶೋಧನಾ ಸಂಸ್ಥೆಯ ಮೇಲೆ ಬಾಂಬ್ ದಾಳಿಗಳನ್ನು ನಡೆಸಲು ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಯೋಜನೆ ರೂಪಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ತನಿಖಾ ದಳದ ಮಾಹಿತಿ ಹಿನ್ನೆಲೆಯಲ್ಲಿ ನಿನ್ನೆ ಸೆರೆ ಸಿಕ್ಕಿರುವ ಭಯೋತ್ಪಾದಕ ಮೊಹಮ್ಮದ್ ಜಿಯಾ ಉಲ್ ಹಕ್ ಎಂಬಾತ ಈ ವಿಚಾರಗಳನ್ನು ಬಾಯಿ ಬಿಟ್ಟಿದ್ದಾನೆ.

ಮೂಲಗಳ ಪ್ರಕಾರ ಈತನನ್ನು ಲಷ್ಕರ್ ಇ ತೋಯ್ಬಾ ಸಂಘಟನೆಯು ಹೈದರಾಬಾದ್‌ನಲ್ಲಿರುವ 'ಡೆಲಾಯಿಟ್ ಟಚ್ ತೊಹ್ಮಾತ್ಸು' ಲೆಕ್ಕ ಪರಿಶೋಧಕ ಸಂಸ್ಥೆಯ ಕಚೇರಿ ಮೇರೆ ದಾಳಿಗಳನ್ನು ನಡೆಸಲು ನಿಯೋಜಿಸಲಾಗಿತ್ತು ಮತ್ತು ಆತ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದ.

ಆಘಾತಕಾರಿ ವಿಚಾರವೆಂದರೆ ಬಂಧಿತ ಹಕ್ ಇದುವರೆಗೆ 'ಡೆಲಾಯಿಟ್ ಟಚ್ ತೊಹ್ಮಾತ್ಸು' ಸಂಸ್ಥೆಯಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ. ಕಂಪನಿ ಬಾಡಿಗೆಗೆ ಪಡೆಯುತ್ತಿದ್ದ ಟ್ಯಾಕ್ಸಿಯಲ್ಲಿ ಈತ ಚಾಲಕನಾಗಿದ್ದ. ಆ ಮೂಲಕ ದುಷ್ಕೃತ್ಯಕ್ಕೆ ಆತ ಸಂಚು ರೂಪಿಸುತ್ತಿದ್ದ.

ಜತೆಗೆ 151 ಎಕರೆ ವ್ಯಾಪ್ತಿಯಲ್ಲಿ ವ್ಯಾಪಿಸಿರುವ ಹೈದರಾಬಾದ್‌ನ ಮಾಹಿತಿ ತಂತ್ರಜ್ಞಾನ ಕೇಂದ್ರ 'ಹೈದರಾಬಾದ್ ಮಾಹಿತಿ ತಂತ್ರಜ್ಞಾನ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಸಿಟಿ' (ಹೈಟೆಕ್ ಸಿಟಿ) ಯಲ್ಲೂ ಭಯೋತ್ಪಾದನಾ ದಾಳಿಗಳನ್ನು ನಡೆಸುವಂತೆ ಹಕ್‌ಗೆ ಸೂಚನೆ ನೀಡಲಾಗಿತ್ತು.

ದಾಳಿಗಳನ್ನು ನಡೆಸಲು ಲಷ್ಕರ್ ಇ ತೋಯ್ಬಾ ಪೂರೈಸಿರುವ ಸ್ಫೋಟಕಗಳನ್ನು ಹಕ್ ಈಗಾಗಲೇ ಪಡೆದುಕೊಂಡಿದ್ದಾನೆ ಎಂದೂ ಮೂಲಗಳು ಹೇಳಿವೆ.

ಹಕ್ 1995ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೊತ್ತ ಮೊದಲ ಬಾರಿಗೆ ಲಷ್ಕರ್ ಇ ತೋಯ್ಬಾ ಸಂಪರ್ಕಕ್ಕೆ ಬಂದಿದ್ದ. 2002ರಲ್ಲಿ ಗುಜರಾತ್ ಗಲಭೆ ನಡೆದ ನಂತರ ಪಾಕಿಸ್ತಾನಕ್ಕೆ ಹೋಗಿದ್ದ ಆತ ಕರಾಚಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಬಾದ್‌ನಲ್ಲಿ ಭಯೋತ್ಪಾದನಾ ತರಬೇತಿ ಪಡೆದುಕೊಂಡಿದ್ದ.

ಈ ಸಂದರ್ಭದಲ್ಲಿ ಸ್ಫೋಟಕಗಳು ಮತ್ತು ಎಕೆ 47 ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವ ತರಬೇತಿಯನ್ನು ಹಕ್‌ಗೆ ನೀಡಲಾಗಿತ್ತು. ಬಳಿಕ ಭಾರತಕ್ಕೆ ವಾಪಸಾಗಿದ್ದ ಆತ, ಹೈದರಾಬಾದ್‌ನ ಹಲವು ಟ್ರಾವೆಲ್ ಏಜೆನ್ಸಿಗಳಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.

2006ರಲ್ಲಿ ಹೈದರಾಬಾದ್‌ನ ಒಡೆಯನ್ ಸಿನಿಮಾ ಹಾಲ್‌ನಲ್ಲಿ ನಡೆದ ಬಾಂಬ್ ಸ್ಫೋಟ ಈತನೇ ನಡೆಸಿದ್ದಾನೆ ಎಂದು ಹೇಳಲಾಗಿದ್ದು, ಜಮ್ಮು-ಕಾಶ್ಮೀರದ ಮೂಲಕ ಆತ ಲಷ್ಕರ್ ಇ ತೋಯ್ಬಾದಿಂದ ಸ್ಫೋಟಕಗಳನ್ನು ಪಡೆದಿದ್ದ ಎಂದು ಮೂಲಗಳು ಹೇಳಿವೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ